ಇಂಗ್ಲೆಂಡ್: ಇತ್ತೀಚೆಗೆ ಫಿನ್ಹ್ಯಾಮ್ ಪಾರ್ಕ್ ಶಾಲೆ, ಗ್ರೀನ್ ಲೇನ್, ಕೊವೆಂಟ್ರಿ, ಮಿಡ್‌ಲ್ಯಾಂಡ್ಸ್ ಇಂಗ್ಲೆಂಡ್. ಕೊವೆಂಟ್ರಿ ಮತ್ತು ಮಿಡ್ಲೆಂಡ್ಸ್ ಕನ್ನಡಿಗರು ಪರಸ್ಪರ ಸಹಯೋಗದೊಂದಿಗೆ ಅನುಬಂಧ ಕಪ್ 2025 ಅನ್ನು ವಿಜೃಂಭಣೆಯಿಂದ ಆಯೋಜಿಸಿದರು.
ಈ ಕ್ರಿಕೆಟ್ ಸ್ಪರ್ಧೆ ಮಿಡ್ಲೆಂಡ್ಸ್ ಪ್ರದೇಶದ ಕೊವೆಂಟ್ರಿಯಲ್ಲಿನ ಫಿನ್ಹ್ಯಾಮ್ ಪಾರ್ಕ್ ಶಾಲೆಯ ಒಳಾಂಗಣ ಮೈದಾನದಲ್ಲಿ ನಡೆಯಿತು. ಚಳಿಗಾಲ ಮುಗಿಯುತ್ತಿರುವ ಸಂದರ್ಭದಲ್ಲಿ, ಕ್ರಿಕೆಟ್ ಪ್ರೇಮಿಗಳು ಈ ಕ್ರೀಡಾ ರಸದೌತಣವನ್ನು ಅನುಭವಿಸಲು ಕಾತುರದಿಂದ ಕಾಯುತ್ತಿದ್ದರು. ಭಾರತದ ಚಾಂಪಿಯನ್ಸ್ ಲೀಗ್‌ನಲ್ಲಿನ ಯಶಸ್ಸು ಮತ್ತು ಭಾರತೀಯರ ಕ್ರಿಕೆಟ್ ಪ್ರೀತಿ ಈ ಟೂರ್ನಮೆಂಟ್‌ಗೆ ಹೆಚ್ಚಿನ ಪ್ರೇರಣೆ ನೀಡಿತು.
ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿ ಕ್ರೀಡೆ ಮತ್ತು ಸಮುದಾಯ ಸಂಘಟನೆಯ ಮಹತ್ವವನ್ನು ಕುರಿತು ಮಾತನಾಡಿ, ಕನ್ನಡಿಗರ ಏಕತೆ ಹಾಗೂ ಕ್ರೀಡಾಸ್ಪರ್ಧಾತ್ಮಕ ಮನೋಭಾವಕ್ಕೆ ಶ್ಲಾಘನೆ ಸಲ್ಲಿಸಿದರು.
ಶಾರ್ಟ್ ಪಿಚ್ ಕ್ರಿಕೆಟ್ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ಟೂರ್ನಮೆಂಟ್‌ನಲ್ಲಿ ಸ್ಪರ್ಧೆಯ ಎಲ್ಲ ಪಂದ್ಯಗಳು ಉತ್ಸಾಹಭರಿತವಾಗಿದ್ದು,ಆಟಗಾರರು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು. ಸ್ನೇಹಿತರು ಮತ್ತು ಕುಟುಂಬದವರು ಬಲವಾದ ಬೆಂಬಲ ನೀಡಿದ್ದು, ಆಟಗಾರರಿಗೆ ಹೆಚ್ಚಿನ ಉತ್ಸಾಹವನ್ನು ನೀಡಿತು.
ಈ ಟೂರ್ನಮೆಂಟ್‌ನ ಮುಖ್ಯ ಪ್ರಾಯೋಜಕರಾಗಿದ್ದ ಲ್ಯಾವಿಶ್ ರೆಸ್ಟೋರೆಂಟ್, ಸ್ಥಳದಲ್ಲಿ ಭಾಗವಹಿಸಿದ ಎಲ್ಲರಿಗೂ ಸುಸ್ವಾದಿತ ಆಹಾರವನ್ನು ಪೂರೈಸಿ, ಪ್ರೇಕ್ಷಕರ ಅನುಭವವನ್ನು ಹೆಚ್ಚಿಸಿತು. ವಿತರಣಾ ಪಾಲುದಾರರಾಗಿ ಫಾಸ್ಟ್‌ವೇ ಕೊರಿಯರ್ ಕೂಡ ಸಹಭಾಗಿಯಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನೆರವಾಯಿತು. ಪಂದ್ಯಾವಳಿಯ ನೇರ ಪ್ರಸಾರವನ್ನು ಯಶಸ್ವಿಯಾಗಿ ನಿರ್ವಹಿಸಲು ಮತ್ತು ಸ್ಕೋರ್‌ಬೋರ್ಡ್ ವ್ಯವಸ್ಥೆಯನ್ನು ಸೃಜನಾತ್ಮಕವಾಗಿ ಕೈಗೊಳ್ಳಲು
ಲೆಮಿಂಗ್ಟನ್ ಕ್ರಿಕೆಟ್ ಕ್ಲಬ್ ಅಮೋಘ ಬೆಂಬಲ ನೀಡಿತು. ಅವರ ಸಮರ್ಪಣೆ ಮತ್ತು
ಲೆಮಿಂಗ್ಟನ್ ಕ್ರಿಕೆಟ್ ಕ್ಲಬ್ ನ ಸಹಾಯ ನಮ್ಮ ಪಂದ್ಯಾವಳಿ ನಿರ್ವಹಣೆಯನ್ನು ನಿಖರತೆಯ
ಉನ್ನತ ಮಟ್ಟಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಸಂದರ್ಭದಲ್ಲಿ,Cllr ಶ್ರೀಮತಿ ಹೇಮಾ ಯಲ್ಲಪ್ರಗಡ (ವಾರ್ವಿಕ್ ಮತ್ತುಲೆಮಿಂಗ್ಟನ್ ಡಿಸ್ಟ್ರಿಕ್ಟ್ ಕೌನ್ಸಿಲರ್), Cllr ಶ್ರೀ ರಾಮ್ ಪಿ ಲಾಖಾ OBE (ಕೌನ್ಸಿಲರ್ ಬಿನ್ಲೆ ಮತ್ತು ವಿಲ್ಲೆನ್ಹಾಲ್), ಸುಮನ್ (ಮಾಲೀಕರು, ಲ್ಯಾವಿಶ್ ರೆಸ್ಟೋರೆಂಟ್), ಹರೀಶ್ ರಾಮಯ್ಯ- ಸೌತ್ ಇಂಡಿಯಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸ್ಪರ್ಧೆಯ ವಿಶೇಷತೆಗಳು:
ಅನುಬಂಧ ಕ್ರಿಕೆಟ್ ಟೂರ್ನಮೆಂಟ್ ಗಮನಾರ್ಹ ರೀತಿಯಲ್ಲಿ ಪೂರ್ಣಗೊಂಡಿತು. ಸ್ಪರ್ಧೆಯ ಆರಂಭದಲ್ಲಿ ಎಂಟು ತಂಡಗಳು ಕಣಕ್ಕಿಳಿದಿದ್ದು, ತೀವ್ರ ಹೋರಾಟದ ನಂತರ, ಲೆಮಿಂಗ್ಟನ್ ರಾಯಲ್ಸ, ದೇಸಿ ಬಾಯ್ಸ ಆಫ್ ಕೊವೆಂಟ್ರಿ, ಕರುನಾಡು ನೈಟ್ಸ್,
ಮತ್ತು ಕರ್ನಾಟಕ ಕಿಂಗ್ಸ್ ತಂಡಗಳು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟವು.
ನಿರ್ಣಾಯಕ ಹಂತ:
– ಮೊದಲ ಸೆಮಿ ಫೈನಲ್‌ನಲ್ಲಿ ಲೆಮಿಂಗ್ಟನ್ ರಾಯಲ್ಸ್ ತಂಡ ಕರುನಾಡು ನೈಟ್ಸ್ ಅವರನ್ನು ಸೋಲಿಸಿ ಫೈನಲ್‌ಗೆ
ಪ್ರವೇಶಿಸಿತು.
– ಎರಡನೇ ಸೆಮಿ ಫೈನಲ್‌ನಲ್ಲಿ ದೇಸಿ ಬಾಯ್ಸ ಆಫ್ ಕೊವೆಂಟ್ರಿ ತಂಡ ಅತ್ಯುತ್ತಮ ಪ್ರದರ್ಶನ ತೋರಿಸಿ ಕರ್ನಾಟಕ ಕಿಂಗ್ಸ್
ಅನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಾತ್ರಿ ಮಾಡಿತು.
ಅಂತಿಮ ಪಂದ್ಯ:
ಅಂತಿಮ ಪಂದ್ಯದಲ್ಲಿ ಲೆಮಿಂಗ್ಟನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 56 ರನ್ ಗಳಿಸಿದರು. ಆದರೆ ದೇಸಿ ಬಾಯ್ಸ
ಆಫ್ ಕೊವೆಂಟ್ರಿ, ಅಂತಿಮ ಓವರ್‌ನಲ್ಲಿ 57 ರನ್ ಗಳಿಸುವ ಮೂಲಕ ಐತಿಹಾಸಿಕ ಜಯ ಸಾಧಿಸಿ ಅನುಬಂಧ ಕಪ್ ಟ್ರೋಫಿ
ಗೆದ್ದುಕೊಂಡರು. ನಾಯಕ ಲೋಕೇಶ್ ಅವರು ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಗಳಿಂದ ತಂಡವನ್ನು
ಮುನ್ನಡೆಸಿದರು.
ವೈಯಕ್ತಿಕ ಸಾಧನೆಗಳು:
ರನ್ ಗಳಲ್ಲಿ ಶ್ರೇಷ್ಠ ಆಟಗಾರರು:
1. ಸುನಿಲ್ ಕುಮಾರ್ (ಲೆಮಿಂಗ್ಟನ್ ರಾಯಲ್ಸ್) – 93 ರನ್
2. ಲೋಕೇಶ್ (ದೇಸಿ ಬಾಯ್ಸ್) – 85 ರನ್
3. ಈರಯ್ಯ ಹಿರೇಮಠ ಲೆಮಿಂಗ್ಟನ್ ರಾಯಲ್ಸ್) – 75 ರನ್
ವಿಕೆಟ್ ಗಳಲ್ಲಿ ಶ್ರೇಷ್ಠ ಬೌಲರ್‌ಗಳು:
1. ಪವನ್ (ದೇಸಿ ಬಾಯ್ಸ್ ಕೊವೆಂಟ್ರಿ) – 8 ವಿಕೆಟ್
2. ಶ್ರೀಶೈಲ್ ಸಂಗೊಳ್ಳಿ (ಲೆಮಿಂಗ್ಟನ್ ರಾಯಲ್ಸ್) – 7 ವಿಕೆಟ್
3. ಲೋಕೇಶ್ ಎಲ್ಲಾಪುರ (ದೇಸಿ ಬಾಯ್ಸ್ ಕೊವೆಂಟ್ರಿ) – 6 ವಿಕೆಟ್
ಪಂದ್ಯಾವಳಿಯ ಅತ್ಯುತ್ತಮ ಆಟಗಾರ:
ಲೋಕೇಶ್ ಎಲ್ಲಾಪುರ (ದೇಸಿ ಬಾಯ್ಸ್ ಕೊವೆಂಟ್ರಿ) – ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ.
ವ್ಯವಸ್ಥಾಪಕರ ಅಭಿನಂದನೆಗಳು:
ಈ ಟೂರ್ನಮೆಂಟ್ ಯಶಸ್ವಿಯಾಗಲು ದರ್ಶನ್, ಲೋಕೇಶ್, ಮತ್ತು ಗೌತಮ್ ಅವರ ನಿರ್ವಹಣಾ ಕಾರ್ಯತಂತ್ರ ಪ್ರಮುಖ ಪಾತ್ರ ವಹಿಸಿತು. ಅವರ ಪರಿಶ್ರಮಕ್ಕೆ ಕನ್ನಡಿಗರಿಂದ ಹೃತ್ಪೂರ್ವಕ ಅಭಿನಂದನೆಗಳು.
ಅನುಬಂಧ ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾ ಆತ್ಮೀಯತೆಯನ್ನು ತೋರಿಸುವ ವೇದಿಕೆಯಾಗಿತ್ತು. ದೇಸಿ ಬಾಯ್ಸ ಆಫ್ ಕೋವೆಂಟ್ರಿ ತಂಡ ತನ್ನ ಸಂಘಟಿತ ಆಟದಿಂದ ಮೊದಲ ಅನುಬಂಧ ಕಪ್ ಟ್ರೋಫಿಯನ್ನು ಜಯಿಸಲು ಯಶಸ್ವಿಯಾಗಿದ್ದು, ಈ
ಸ್ಪರ್ಧೆಯ ಸ್ಮರಣೀಯ ಘಟನೆಯಾಗಿ ಉಳಿಯಿತು.
ಕರ್ನಾಟಕ ಸಂಸ್ಕೃತಿಯ ಹೆಗ್ಗಳಿಕೆ – ಕನ್ನಡಿಗರ ಏಕತೆ ಅನುಬಂಧ ಕಪ್ 2025 ಮತ್ತೊಮ್ಮೆ ಮಿಡ್ಲೆಂಡ್ಸ್ ಮತ್ತು ಕೊವೆಂಟ್ರಿ ಕನ್ನಡಿಗರ ಸಂಘಟನಾ ಸಾಮರ್ಥ್ಯವನ್ನು ತೋರಿಸುವ ಪ್ರಮುಖ ಉದಾಹರಣೆ ಎನಿಸಿತು.
ಕ್ರಿಕೆಟ್ ಕೇವಲ ಒಂದು ಆಟವಷ್ಟೇ ಅಲ್ಲ – ಅದು ಜನರನ್ನು ಒಗ್ಗೂಡಿಸುವ ಮಾಧ್ಯಮ. ಈ ಆಟದ ಜೊತೆಗೆ ಕನ್ನಡಿಗರ ಬಾಂಧವ್ಯವನ್ನೂ ಗಟ್ಟಿ ಮಾಡುವ ಈ ಅನುಬಂಧ ಕಪ್, ಮುಂದಿನ ವರ್ಷಗಳಲ್ಲಿಯೂ ಮತ್ತಷ್ಟು ಉತ್ಸಾಹದಿಂದ ನಡೆಯಲಿ!
ಕೊನೆಯಲ್ಲಿ ಈ ವರ್ಷ ಗೆದಿದ್ದು ಮಾತ್ರ ಭಾಗವಹಿಸಿದ ಸರ್ವ ಕನ್ನಡಿಗರು ಎಂಬುವುದು ವಿಶೇಷ.