ರಾಮಕೃಷ್ಣ ಪರಮಹಂಸರು ಪೂಜೆ ಮಾಡುತ್ತಿದ್ದಾಗ ಭಗವಂತನಿಗೆ ನೈವೇದ್ಯ ಇಡುವುದಕ್ಕೆ ಮುಂಚೆ ತಾವೇ ರುಚಿ ನೋಡಿ ಇಡುತ್ತಿದ್ದರು. ದೇವಸ್ಥಾನದ ಮೇಲ್ವಿಚಾರಕರು, ರಾಮಕೃಷ್ಣರನ್ನು ಕರೆದು ,ಇದು ಸರಿಯಾದ ರೀತಿಯಲ್ಲ, ಯಾವ ಶಾಸ್ತ್ರದಲ್ಲೂ ಕೂಡ ಇದನ್ನು ಬರೆದಿಲ್ಲ, ಭಗವಂತನಿಗೆ ಮೊದಲು ನೈವೇದ್ಯ ಅರ್ಪಿಸಿ, ಏನು ಉಳಿಯುತ್ತದೊ ಅದನ್ನು ನಾವು ಸೇವಿಸಬೇಕು, ಆದರೆ ಇಲ್ಲಿ ನಿಮ್ಮಿಂದ ಅಪಚಾರದ ಕೆಲಸವಾಗುತ್ತಿದೆ, ನೀವು ಭಗವಂತನಿಗೆ ಅರ್ಪಿಸುವುದಕ್ಕೆ ಮೊದಲೇ , ನೀವೇ ತಿಂದು ನೋಡುತ್ತಿರುವಿರಲಿಲ್ಲಾ, ಎಂದು ಆಕ್ಷೇಪಣೆ ಮಾಡಿದರು.
ಆಗ ರಾಮಕೃಷ್ಣರು, ಇದು ಹೇಗೆ ಅಪಚಾರವಾಗಲು ಸಾಧ್ಯ? ಏಕೆಂದರೆ ನನ್ನ ತಾಯಿ ನನಗೆ ಊಟ ಬಡಿಸುವುದಕ್ಕೆ ಮೊದಲು ಆಕೆ ತಿಂದು ನೋಡಿ ನಂತರ ನನಗೆ ತಿನ್ನಿಸುತ್ತಿದ್ದಳು, ತಾಯಿಯ ಪ್ರೇಮ ಅಷ್ಟೊಂದು ಗಾಢವಾಗಿರುತ್ತಿತ್ತು, ಹಾಗಿರುವಾಗ ಈ ಭಗವಂತನ ಪ್ರೇಮ ಅದಕ್ಕಿಂತಲೂ ಮಿಗಿಲಾದುದ್ದಲ್ಲವೇ? ನಾನು ತಿನ್ನದೇ ರುಚಿ ನೋಡದೇ, ಭಗವಂತನಿಗೆ ಪ್ರಸಾದವನ್ನು ಅರ್ಪಿಸುವುದು ನನ್ನಿಂದ ಸಾಧ್ಯವಾಗುವುದಿಲ್ಲ, ಅದು ಅವನಿಗೆ ನೀಡಲು ಯೋಗ್ಯವಾದದ್ದು ಅಥವಾ ಅಲ್ಲವೋ ಎಂದು ಗೊತ್ತಾಗುವುದಾದರೂ ಹೇಗೆ? ಎಂದರು.
ಇದರಿಂದಾಗಿ ಗೊತ್ತಾಗುತ್ತದೆ, ಅವರಿಗೆ ಭಗವಂತನಲ್ಲಿ ಎಂತಹ ಅನನ್ಯತೆ, ನಿಕಟತೆ, ಎಂತಹ ಪ್ರೀತಿ ಇತ್ತು ಎಂಬುದು.
ರಾಮಕೃಷ್ಣರು ಕೆಲವು ಸಲ, ಇಡೀ ದಿನ ನರ್ತಿಸುತ್ತಲೇ ಇರುತ್ತಿದ್ದರು. ಕೆಲವು ಸಲ ಎಷ್ಟು ಹೊತ್ತಾದರೂ ದೇವಾಲಯಕ್ಕೇ ಬರುತ್ತಿರಲಿಲ್ಲ.ಆಗ ಅವರನ್ನು ಕರೆದು ಏಕೆ ಹೀಗೆ ಎಂದು ವಿಚಾರಿಸಿದಾಗ, ಅವರು , ಯಾವಾಗ ಆಗಬೇಕೊ ಆಗ ಅದೇ ಆಗುತ್ತದೆ, ಯಾವಾಗ ಆಗುವುದಿಲ್ಲವೋ ಆಗ ಆಗುವುದಿಲ್ಲ, ಯಾವಾಗ ಆತ ಕರೆಸಿಕೊಳ್ಳುತ್ತಾನೋ, ಆಗ ಎಲ್ಲವೂ ಆಗುತ್ತದೆ. ನಾನು ,ಎಂಬುದು ಇದ್ದಾಗ, ಪೂಜೆಯಾದರೂ ಯಾರದ್ದು? ಯಾವಾಗ ಅನನ್ಯತೆಯ ಭಾವ ಉದಯಿಸುತ್ತದೋ ಆಗ ಎಲ್ಲವೂ ನಡೆಯುತ್ತದೆ. ಯಾವುದೂ ನನ್ನ ಕೈಯಲ್ಲಿಲ್ಲ, ಯಾವಾಗ ಆಗಬೇಕೊ, ಆಗ ಸಹಜವಾಗಿ ತಾನಾಗಿಯೇ ಎಲ್ಲವೂ ನಡೆಯುತ್ತದೆ ಎನ್ನುತ್ತಿದ್ದರು.
ರಾಮಕೃಷ್ಣರಂಥ ಪೂಜಾರಿ ಮತ್ಯಾವ ದೇವಾಲಯದಲ್ಲೂ ಸಿಗುವುದಿಲ್ಲ, ದಕ್ಷಿಣೇಶ್ವರದ ಭಗವಂತ, ನಿಜವಾಗಿಯೂ ಅದೃಷ್ಟವಂತ, ಏಕೆಂದರೆ ರಾಮಕೃಷ್ಣರಂತ ಪೂಜಾರಿ ಅವನಿಗೆ ಸಿಕ್ಕಿದ್ದರು.
ಅನನ್ಯ, ಭಾವದ ಅರ್ಥ,” ನಾನು ಮತ್ತು ನೀನು ಇಬ್ಬರು ಅಲ್ಲ, ಒಬ್ಬರು ಮಾತ್ರ . ಭಕ್ತ ಮತ್ತು ಭಗವಂತ, ಇಬ್ಬರು ಅಲ್ಲ, ಒಬ್ಬರೇ. ಭಕ್ತನಿಲ್ಲದೇ, ಭಗವಂತನಿಲ್ಲ , ಭಗವಂತ ನಿಲ್ಲದೇ ಭಕ್ತನಿಲ್ಲ. ಇಬ್ಬರ ನಡುವೆ ಒಂದು ಹೊಸ ಸತ್ಯದ ಅವಿರ್ಭಾವ ಆಗುತ್ತದೆ. ಅಂದರೆ ಹೊಸದೊಂದು ಜ್ಯೋತಿರ್ಮಯ ಚೈತನ್ಯದ ಅವಿರ್ಭಾವ ಆಗಿರುತ್ತದೆ.
ಭಕ್ತ ಮತ್ತು ಭಗವಂತ ಎಂಬುದು ದ್ವೈತದ ಭಾಷೆ, ಭಕ್ತಿ ಅದ್ವೈತದ್ದು. ಭಕ್ತ ,ಬರು ಬರುತ್ತಾ ಭಗವಂತನೇ ಆಗಿಬಿಡುತ್ತಾನೆ, ಭಗವಂತ ಬರು ಬರುತ್ತಾ, ಭಕ್ತ ಆಗಿಬಿಡುತ್ತಾನೆ. ಇಬ್ಬರೂ ಏಕಾತ್ಮವಾಗಿರುತ್ತಾರೆ.
ಸಂಗ್ರಹ: ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ