ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ಈ ಅವಳಿ ಸಹೋದರಿಯರು ಆಟವಾಡುವ ಚಿಕ್ಕ ವಯಸ್ಸಿನಲ್ಲಿ ಮಾಡಿರುವ ಸಾಧನೆ ಅದ್ವಿತೀಯವಾದುದು. ಸಾಧನೆಗೆ ವಯಸ್ಸು ಮುಖ್ಯ ಅಲ್ಲ ಎಂಬುವುದನ್ನ ಈ ಬಾಲಕಿಯರು ಸಾಬೀತುಪಡಿಸಿದ್ದಾರೆ.
ಶಿಕ್ಷಕರಾದ ಸಂತೋಷ ಬಂಡೆ ಹಾಗೂ ಸುರೇಖಾ ಬಂಡೆ ಅವರ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ ಹಾಗೂ ಶ್ರೀನಿಧಿ ಬಂಡೆ ಸದ್ಯ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು, ಅವರು ಕೇವಲ 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಹೇಳಿ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ವರು ಚಿಕ್ಕ ಮಕ್ಕಳ ಈ ಅಪರೂಪದ ಗ್ರಹಿಕಾ ಶಕ್ತಿ, ಬುದ್ಧಿಶಕ್ತಿಯ ಸಾಧನೆಯನ್ನು ಪರಿಗಣಿಸಿ, ರೆಕಾರ್ಡ್ ಟೈಟಲ್ ಸರ್ಟಿಫಿಕೇಟ್, ಟ್ರೋಫಿ, ಬ್ಯಾಡ್ಜ್, ಮೆಡಲ್ ನೀಡುವ
ಮೂಲಕ ನೂತನ ವಿಶ್ವದಾಖಲೆಯ ಹೆಮ್ಮೆಯೊಂದಿಗೆ ಗೌರವಿಸಿದ್ದಾರೆ.
47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆ ಹೇಳಿದ ಯುಕೆಜಿ ಅವಳಿ ಸಹೋದರಿಯರು – ಎಂಬ ತಲೆಬರಹದ ಮೂಲಕ ಬುದ್ಧಿಶಕ್ತಿ ವಿಭಾಗದಲ್ಲಿ ಇದೊಂದು ನೂತನ ವಿಶ್ವದಾಖಲೆಯ ಸಾಧನೆ ಎಂದು ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ ನವರು ಘೋಷಿಸಿ, ಗೌರವಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮಕ್ಕಳ ಈ ಸಾಧನೆಗಾಗಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡೋವರು ನ್ಯಾಷನಲ್ ರೆಕಾರ್ಡ್ ದಾಖಲೆಯೊಂದಿಗೆ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರತಿಯೊಂದು ಮಗುವು ಪ್ರತಿಭಾನ್ವಿತ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವ ಜತೆಗೆ ಚಿಕ್ಕಂದಿನಿಂದಲೇ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರೆ ಒಳಿತಾಗುತ್ತದೆ. ಮಕ್ಕಳ ಈ ವಿಶ್ವದಾಖಲೆಯ ಸಾಧನೆ ಸಂತಸ ತಂದಿದೆ ಎಂದು ಮಕ್ಕಳ ತಂದೆಯವರಾದ ಸಂತೋಷ ಬಂಡೆ ತಮ್ಮ ಸಂತೋಷ ವ್ಯಕ್ತ ಪಡಿಸಿದರು.