Live Stream

[ytplayer id=’22727′]

| Latest Version 8.0.1 |

National NewsState News

🌻ಕಥೆ: ಮನುಷ್ಯನ ಸ್ವಾರ್ಥ ಬುದ್ಧಿ🌻

🌻ಕಥೆ: ಮನುಷ್ಯನ ಸ್ವಾರ್ಥ ಬುದ್ಧಿ🌻

 

 

ಒಂದು ಸಣ್ಣ ಊರಿನಲ್ಲಿ ವಾಸಿಸುತ್ತಿದ್ದ ಮನುಷ್ಯನಿಗೆ ,ಜೀವನೋಪಾಯಕ್ಕೆ,ಯಾವ ಕೆಲಸವೂ ಇರಲಿಲ್ಲ.ಆತ ಜೀವನದಲ್ಲಿ ತುಂಬಾ ಬೇಸತ್ತಿದ್ದ. ಯಾವ ದಾರಿಯೂ ಕಾಣದೆ ಆತ ಕಾಡಿನಿಂದ ಸೌದೆ ತಂದು ಮಾರಾಟ ಮಾಡಲು ನಿರ್ಧರಿಸಿ, ಅಂಗಡಿಗೆ ಹೋಗಿ ಒಂದು ಕೊಡಲಿಯನ್ನು ಕೊಂಡು ತಂದ. ಆ ಕೊಡಲಿಗೆ ,ಕಾವು ಇರಲಿಲ್ಲ. ಹತ್ತಿರದಲ್ಲಿದ್ದ ಕಾಡಿಗೆ ಹೋಗಿ, ಆ ಕೊಡಲಿಯ ಕಾವಿಗಾಗಿ ಮರಗಳನ್ನು ಹುಡುಕುತ್ತಿದ್ದ.

ಆ ಕಾಡಿನಲ್ಲಿ ಅನೇಕ ಜಾತಿಯ ಮರಗಳು ಒಂದಕ್ಕಿಂತ ಒಂದು ಸೊಗಸಾಗಿ ಬೆಳೆದು ನಿಂತಿದ್ದವು. ಈ ವ್ಯಕ್ತಿ ಮರಗಳ ಮುಂದೆ ನಿಂತು, ದೈನ್ಯತೆಯಿಂದ ಹೇ , ಪವಿತ್ರ ವೃಕ್ಷಗಳೇ, ನಾನು ಬಹಳ ಬಡ ಮನುಷ್ಯ , ನನ್ನ ಜೀವನೋಪಾಯಕ್ಕೆ ಬಹಳ ಕಷ್ಟವಾಗಿದೆ, ನಿಮ್ಮಲ್ಲಿ ಯಾವುದಾದರೂ ಒಂದು ಮರ ಒಂದು ತುಂಡು ಕೊಂಬೆಯನ್ನು ಕೊಟ್ಟರೆ, ನನಗೆ ತುಂಬಾ ಸಹಾಯವಾಗುತ್ತದೆ,ನಿಮ್ಮ ಹೆಸರು ಹೇಳಿಕೊಂಡು ಜೀವನ ನಡೆಸುತ್ತೇನೆ ಎಂದು ಬೇಡಿಕೊಂಡ.

ಆ ಕಾಡಿನ ಮರಗಳಿಗೆ ಅವನ ಕಷ್ಟವನ್ನು ನೋಡಿ ಬಹಳವಾಗಿ ಮರುಕ ಉಂಟಾಯಿತು. ಅವುಗಳು ಅವನ ಬಗ್ಗೆ ಕನಿಕರದಿಂದ ಅವನು ಕೇಳಿದ್ದನ್ನು ಕೊಡಲು ಒಪ್ಪಿಕೊಂಡವು. ಆದರೆ ಆ ವ್ಯಕ್ತಿ ರಂಬೆಯನ್ನು ಕೇಳಿದ ಉದ್ದೇಶ ಅವುಗಳಿಗೆ ತಿಳಿದಿರಲಿಲ್ಲ. ಅವನೇನು ಅಂಥಾ ಹೆಚ್ಚಿನದೇನನ್ನೂ ಕೇಳಿಲ್ಲ, ಕೇವಲ ಒಂದೇ ಒಂದು ರಂಬೆ ತಾನೇ ಎಂದು ಆ ಮರಗಳಿಗೆ ಅನ್ನಿಸಿತು. ಅವನಿಗೆ ಬೇಕಾದ ರಂಬೆಯನ್ನು ಮುರಿದುಕೊಳ್ಳುವಂತೆ ಹೇಳಿದವು.

ಕೂಡಲೇ ಅವನು, ಕಾಡಿನ ಎಲ್ಲಾ ಮರಗಳ ಸುತ್ತ ,ಸ್ವಲ್ಪ ಸಮಯ ಸುತ್ತಾಡಿದ, ಎಲ್ಲಾ ಮರಗಳ ರಂಬೆಗಳ ಮೇಲೆ ಕಣ್ಣು ಹಾಯಿಸಿ ನೋಡಿದ. ಒಂದು ಮರದಲ್ಲಿ‌ ತೋಳು ಗಾತ್ರದ ದುಂಡಗಿನ ನೇರವಾದ ಒಂದು ರೆಂಬೆ ಅವನ ಕಣ್ಣಿಗೆ ಬಿತ್ತು. ಅದು ಇವನ ಕೊಡಲಿಯ ಹಿಡಿಗೆ ಸರಿ ಹೋಗುವಂತೆ ಕಾಣಿಸಿತು. ತಕ್ಷಣ ಅದನ್ನು ಮುರಿದುಕೊಂಡು ಮನೆಗೆ ಹೋಗಿ, ಅದನ್ನು ತನ್ನ ಕೊಡಲಿಗೆ ಹಿಡಿಯನ್ನಾಗಿ ಮಾಡಿ ಹಾಕಿದ.

ಮಾರನೇ ದಿನದಿಂದಲೇ, ಅವನು ಆ ಕೊಡಲಿಯನ್ನು, ಹೆಗಲ ಮೇಲಿಟ್ಟುಕೊಂಡು, ಅದೇ ಕಾಡಿಗೆ ಹೋಗಿ ಮರಗಳನ್ನು ಕಡಿಯಲು ಶುರುಮಾಡಿದ .ಅವನು ಪ್ರತಿನಿತ್ಯ, ಕಾಡಿಗೆ ಬಂದು ದೊಡ್ಡದು ,ಸಣ್ಣದು ,ಒಣಗಿದ್ದು, ಹಸಿಯದು ಹೀಗೆ ಎಲ್ಲಾ ಮರಗಳನ್ನು ಕಡಿದು ಉರುಳಿಸಿ, ಪೇಟೆಯಲ್ಲಿ ಮಾರಿ ಹಣ ಸಂಪಾದನೆ ಮಾಡ ತೊಡಗಿದ. ದಿನ ಕಳೆದಂತೆ ದಟ್ಟ ಕಾಡು ಹೋಗಿ, ಬರೀ ಬಯಲಾಗ ತೊಡಗಿತು . ಕೊನೆಯಲ್ಲಿ, ಒಂದು ಮುದಿ ಹುಣಸೆ ಮರ, ಒಂದು ಆಲದ ಮರ ಮಾತ್ರ, ಇನ್ನು ತಮ್ಮ ಸರದಿ ಯಾವಾಗ ಬರಬಹುದು ಎಂದು ಗೋಳಾಡುತ್ತಾ ಕಾಯುತ್ತಾ ನಿಂತಿದ್ದವು.

ಆಲದ ಮರ, ಹುಣಸೆ ಮರದ ಬಳಿ ,” ಬಡವ ಪಾಪ , ಹೇಗಾದರೂ ಬದುಕಿಕೊಳ್ಳಲಿ ಎಂದು ನಾವು ಮಾಡಿದ ದಾನವೇ ನಮ್ಮ ಕುಲಕ್ಕೆ ಮೃತ್ಯುವಾಗಿಬಿಟ್ಟಿತಲ್ಲ! ಎಂದು ನಿಟ್ಟಿಸಿರು ಬಿಡುತ್ತಾ ಹೇಳಿತು.

ಹೌದು, ನಾವು ಅವನನ್ನು ನಂಬಿ ಮೋಸ ಹೋದೆವು. ಅಪಾತ್ರರಿಗೆ ದಾನ ಮಾಡಿದರೆ, ಅದರಿಂದ ನಮಗೇ ಕೇಡು ಉಂಟಾಗುವುದೆಂದು ನಮಗೆ ಆಗ ಹೊಳೆಯಲೇ ಇಲ್ಲ,ಎಂದಿತು ಹುಣಸೆ ಮರ.

ಮನುಷ್ಯನ ಸ್ವಭಾವವೇ ಅಷ್ಟು, ಸ್ವಲ್ಪ ಸುಖ ಸಂಪತ್ತು ಬಂದಂತೆಲ್ಲಾ, ಅವನಲ್ಲಿದ್ದ ಮಾನವೀಯ ಗುಣಗಳು ಮರೆಯಾಗಿ ಬಿಡುತ್ತವೆ. ತನಗೆ ಹಿಂದೆ ಸಹಾಯ ಮಾಡಿದವರನ್ನು ಮರೆತು ಬಿಡುತ್ತಾನೆ.

ಕೈತುತ್ತು ನೀಡಿದ ಕೈಯನ್ನೇ ಕತ್ತರಿಸುವಂತ ಸ್ವಾರ್ಥಿಯಾಗುತ್ತಾನೆ.

✍️ : ಸುವರ್ಣಾ ಮೂರ್ತಿ.

ಸಂಗ್ರಹ : ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";