ಒಬ್ಬ ವ್ಯಕ್ತಿ ಒಮ್ಮೆ ಭಗವಂತನಿಗೊಂದು ಪತ್ರ ಬರೆದ.ನಾನು ತುಂಬಾ ಕಷ್ಟದಲ್ಲಿದ್ದೇನೆ , ನನ್ನ ತಾಯಿ ಮರಣ ಸ್ಥಿತಿಯಲ್ಲಿದ್ದಾಳೆ, ಅವಳಿಗೆ ಔಷಧಿ, ಕೊಡಿಸಲು ನನ್ನ ಬಳಿ ಒಂದು ಕಾಸು ಕೂಡಾ ಇಲ್ಲ,ನನಗೆ ತುರ್ತಾಗಿ ಐನೂರು ರೂಪಾಯಿ ಬೇಕಿದೆ, ಇದೊಂದು ಬಾರಿ ನಿನ್ನಲ್ಲಿ ಬೇಡುತ್ತಿದ್ದೇನೆ, ಮತ್ತೆಂದೂ ಕೂಡಾ ನಿನ್ನಲ್ಲಿ ಏನನ್ನೂ ಬೇಡುವುದಿಲ್ಲ, ದಯವಿಟ್ಟು ಕಳಿಸು,ನನಗೆ ನಿನ್ನ ವಿಳಾಸ ಗೊತ್ತಿಲ್ಲ, ಹಾಗಾಗಿ ಪೋಸ್ಟ್ ಮಾಸ್ಟರ್ ನ ವಿಳಾಸಕ್ಕೆ ಪತ್ರ ಕಳಿಸಿದ್ದೇನೆ ಎಂದು ಬರೆದು, ಪತ್ರವನ್ನು ಪೋಸ್ಟ್ ಡಬ್ಬಿಗೆ ಹಾಕಿದ. ಪೋಸ್ಟ್ ಮಾಸ್ಟರ್ ಗೆ ಭಗವಂತನ ವಿಳಾಸ ಗೊತ್ತಿರಬಹುದೆಂದು ಅವನ ಎಣಿಕೆ.
ಪೋಸ್ಟ್ ಮಾಸ್ಟರ್ ಪತ್ರವನ್ನು ಒಡೆದು ನೋಡಿದಾಗ, ಅವನಿಗೆ ಪತ್ರ ಬರೆದವನ ಮೇಲೆ ಕರುಣೆ ಉಕ್ಕಿ ಬಂತು.ಯಾರೋ ಬಹಳ ಮುಗ್ದ ಮನುಷ್ಯನಿರಬೇಕು, ಮನೆಯಲ್ಲಿ ಏನೋ, ಬಹಳ ತೊಂದರೆಯಾಗಿರಬೇಕು. ಆತ ನಿರಾಶನಾಗಬಾರದೆಂದುಕೊಂಡು ಇದಕ್ಕೆ ಏನಾದರೂ ವ್ಯವಸ್ಥೆಯನ್ನು ತಾನೇ ಮಾಡಬೇಕೆಂದುಕೊಂಡ. ಇವನೂ ಕೂಡಾ ಅಷ್ಟು ಹಣವಂತನೇನಲ್ಲ, ಮನೆಯಲ್ಲಿ ಬಹಳ ತಾಪತ್ರಯ ಇತ್ತು, ಇವನಿಗೆ ಬರುವ ಸಂಬಳ ಮನೆ ಖರ್ಚಿಗೆ ಸಾಕಾಗುತ್ತಿರಲಿಲ್ಲ.ಆದರೂ ಕೂಡಾ ಇವನ ಮೇಲಿನ ಕನಿಕರದಿಂದ, ತನ್ನ ಇತರ ಸಹ ನೌಕರರಿಂದ ಚಂದಾ ಎತ್ತಿ, ಹೇಗೋ ನಾನೂರ ಐವತ್ತು ರೂಪಾಯಿಗಳನ್ನು ಹೊಂದಿಸಿದ. ಇನ್ನೂ ಐವತ್ತು ಕಡಿಮೆಯಾದರೂ, ಪರವಾಗಿಲ್ಲ , ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು, ಆ ಹಣವನ್ನು ಆ ವ್ಯಕ್ತಿಗೆ ಮನಿಯಾರ್ಡರ್ ಮೂಲಕ ಕಳಿಸಿದ.
ಅನಾಯಾಸವಾಗಿ ಅಷ್ಟು ಹಣವನ್ನು ಪಡೆದ ಆ ವ್ಯಕ್ತಿ , ಸಂತೋಷ ಪಡುವುದರ ಬದಲು, ಭಗವಂತನ ಮೇಲೇ ಸಿಟ್ಟುಮಾಡಿಕೊಂಡು, ಹೇಳಿದ,” ಇನ್ನು ಮುಂದೆ ನೀನು, ಹಣ ಕಳಿಸುವುದಾದರೆ, ಪೋಸ್ಟ್ ಆಫೀಸ್ ಮೂಲಕ ಕಳಿಸಬೇಡ, ಏಕೆಂದರೆ ಅವರು ತಮ್ಮ ಐವತ್ತು ರೂಪಾಯಿ ಕಮಿಷನ್ ಮುರಿದುಕೊಂಡು ನನಗೆ ಹಣ ಕೊಡುತ್ತಾರೆ” ಎಂದ. ಮನುಷ್ಯನಿಗೆ ತೃಪ್ತಿ ಎಂಬುದು ಎಂದಿಗೂ ಬರುವುದಿಲ್ಲ.
ಇಂತಹ ಮನುಷ್ಯರ ಸೇವೆಯನ್ನು ಭಗವಂತನಾದರೂ ಎಷ್ಟು ತಾನೆ , ಮಾಡಲು ಸಾಧ್ಯ? ಅವನು ಕೂಡಾ ದಣಿದಿರಬೇಕು, ಹಾಗಾಗಿಯೇ ಅವನು ಯಾರಿಗೂ ಕಾಣಿಸದೇ,ನಿದ್ರಿಸುತ್ತಿರಬೇಕು. ಅವನಿಗೆ ಗೊತ್ತು, ತಾನೇನಾದರೂ ಕಾಣಿಸಿಕೊಂಡರೆ,ಜನ ತನ್ನನ್ನು ಹೇಗೆ ಬಳಸಿಕೊಳ್ಳಬಹುದೆಂದು. ಹಾಗಾಗಿಯೇ ಅವನು ಇದೂವರೆಗೂ ಯಾರ ಕಣ್ಣಿಗೂ ಬೀಳದೇ ಇರುವುದು.
ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ