ಖಾನಾಪೂರ: ಮೀರಜ್-ಲೋಂಡಾ ಪ್ಯಾಸೆಂಜರ್ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವಕನ ಪಾಕೇಟ್ ಕಳವು ಆಗಿ, ಸುಮಾರು 1 ಲಕ್ಷ 9 ಸಾವಿರ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ ಘಟನೆ ಖಾನಾಪೂರ ತಾಲೂಕಿನ ಲೋಂಡಾ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಲೋಂಡಾ ಗ್ರಾಮದ ನಿವಾಸಿ ದೀಪಕ್ ಮಡ್ಡಿ ಎಂಬವರು ಬೆಳಗಾವಿಯಿಂದ ಲೋಂಡಾಕ್ಕೆ ಮೀರಜ್-ಲೋಂಡಾ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಶುಕ್ರವಾರ ತಡರಾತ್ರಿ ರೈಲಿನಲ್ಲಿ ನಿದ್ರಿಸಿದ್ದ ದೀಪಕ್, ಲೋಂಡಾ ರೈಲು ನಿಲ್ದಾಣ ತಲುಪಿದ ಬಳಿಕ ಒಂದು ಗಂಟೆಯವರೆಗೆ ನಿದ್ರೆಯಿಂದ ಎಚ್ಚರವಾಗದೆ ಇದ್ದರು. ಎಚ್ಚರಗೊಂಡಾಗ ಅವರ ಪಾಕೇಟ್ ಅನ್ನು ಯಾರೋ ಅಪರಿಚಿತರು ಖಾಲಿ ಮಾಡಿದ್ದಾರೆ.
ಕಳ್ಳರು ಸುಮಾರು 9300 ರೂಪಾಯಿ ನಗದು, ಸುಮಾರು 1 ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ನಾಣ್ಯ, ಹಾಗೂ ವೈಯಕ್ತಿಕ ದಾಖಲೆಗಳು ಒಳಗೊಂಡ ಪರ್ಸ್‌ನ್ನು ಅಪಹರಿಸಿದ್ದಾರೆ. ಕಳವು ಮಾಡಿದ ಬಳಿಕ ದಾಖಲೆಗಳನ್ನು ಲೋಂಡಾ ಗ್ರಾಮ ಪಂಚಾಯಿತಿ ಪಕ್ಕದ ಪ್ರದೇಶದಲ್ಲಿ ಬಿಸಾಡಲಾಗಿದ್ದು, ಸ್ಥಳೀಯರು ಅದನ್ನು ಪತ್ತೆಹಚ್ಚಿದ್ದಾರೆ.
ದೀಪಕ್ ಮಡ್ಡಿ ಅವರು ಈ ಕುರಿತು ರೇಲ್ವೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಲೋಂಡಾ ಗ್ರಾಮ ಪಂಚಾಯಿತಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ರಾತ್ರಿಯ ವೇಳೆ ಓರ್ವ ಶಂಕಾಸ್ಪದ ವ್ಯಕ್ತಿ ದೃಶ್ಯಕ್ಕೆ ಸೆರೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ರೈಲು ಪ್ರಯಾಣದ ವೇಳೆ ಸಾರ್ವಜನಿಕರು ಜಾಗರೂಕರಾಗಿ ತಮ್ಮ ವೈಯಕ್ತಿಕ ವಸ್ತುಗಳನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143