Live Stream

[ytplayer id=’22727′]

| Latest Version 8.0.1 |

Local NewsState News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಡಾ. ಪುರುಷೋತ್ತಮ ಬಿಳಿಮಲೆ ಸೂಚನೆ: ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಡಾ. ಪುರುಷೋತ್ತಮ ಬಿಳಿಮಲೆ ಸೂಚನೆ: ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ

 

ಬೆಳಗಾವಿ: ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕನ್ನಡ ಭಾಷೆಯ ಕಡ್ಡಾಯ ಬಳಕೆಗೆ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ (ಜುಲೈ 10) ನಡೆದ “ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ

ಕಚೇರಿಗಳಲ್ಲಿನ ವ್ಯವಹಾರ, ಆದೇಶ ಪತ್ರಗಳು ಮತ್ತು ಸಾರ್ವಜನಿಕರಿಗೆ ನೀಡುವ ಸೇವೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಪಾಲಿಕೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಯಮಿತವಾಗಿ ಕನ್ನಡ ಬಳಸಬೇಕು ಎಂದು ಡಾ. ಬಿಳಿಮಲೆ ತಾಕೀತು ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಕಚೇರಿ ವೇಳೆಯಲ್ಲಿ ಕನ್ನಡ ಬಳಸದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಲ್ಲಿ, ಅಂತಹ ನೌಕರರ ವಿರುದ್ಧ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ

ಕರ್ನಾಟಕ ಸರ್ಕಾರದ ಆದೇಶದಂತೆ ಎಲ್ಲಾ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಕಡ್ಡಾಯವಾಗಿರಬೇಕು. ಆದರೆ, ಬೆಳಗಾವಿ ನಗರದಲ್ಲಿ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಡಾ. ಬಿಳಿಮಲೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಎಲ್ಲಾ ಅಂಗಡಿ, ಮುಂಗಟ್ಟುಗಳು ಮತ್ತು ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡ ಅಕ್ಷರಗಳನ್ನು ಕಡ್ಡಾಯವಾಗಿ ಅಳವಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು. ಕನ್ನಡ ನಾಮಫಲಕ ಅಳವಡಿಸದ ಅಂಗಡಿ-ಮುಂಗಟ್ಟುಗಳಿಗೆ ಪರವಾನಿಗೆ ನೀಡುವುದಿಲ್ಲ, ಮತ್ತು ಅಂತಹವುಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಸಂತೋಷ್ ಹಾನಗಲ್ ಸ್ಪಷ್ಟಪಡಿಸಿದರು.

ಗಡಿ ಭವನದ ನಿರ್ವಹಣೆ ಮತ್ತು ವೇಗಾ ಹೆಲ್ಮೆಟ್ ಪ್ರಕರಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿರುವ ವಡಗಾವಿಯ ಗಡಿ ಭವನದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಡಾ. ಬಿಳಿಮಲೆ ಬೇಸರ ವ್ಯಕ್ತಪಡಿಸಿದರು. ಗಡಿ ಭವನವನ್ನು ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಅಥವಾ ಸರ್ಕಾರಿ ಕಚೇರಿಗಳ ಬಳಕೆಗೆ ಅನುಕೂಲವಾಗುವಂತೆ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಇದರ ಜೊತೆಗೆ, ವೇಗಾ ಹೆಲ್ಮೆಟ್ ಘಟಕದಲ್ಲಿ ಕನ್ನಡ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವ ಕುರಿತು ಕೇಳಿಬಂದಿರುವ ದೂರುಗಳ ಬಗ್ಗೆಯೂ ಡಾ. ಬಿಳಿಮಲೆ ಗಮನ ಸೆಳೆದರು. ಪಾಲಿಕೆ ಮತ್ತು ಕೈಗಾರಿಕಾ ಇಲಾಖೆ ಸಮನ್ವಯದೊಂದಿಗೆ ವೇಗಾ ಹೆಲ್ಮೆಟ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಕನ್ನಡಿಗರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ, ಕನ್ನಡಪರ ಹೋರಾಟಗಾರ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ. ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ, ಕಂದಾಯ ವಿಭಾಗದ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";