ದೆಹಲಿ: ಸ್ವಾತಂತ್ರೋತ್ಸವ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿಯ ಮೂವರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಬ್ಬರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವ ಮೂಲಕ ಇಡೀ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಳಗಾವಿ ನಗರದ ಸರಕಾರಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಗಳಾದ ಕುಮಾರಿ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕೆರೂರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಲ್ಲಪ್ಪ ಬೆಕ್ಕೇರಿ ಹಾಗೂ ರಾಜ್ಯದಲ್ಲಿಯೇ ಒಬ್ಬರಾಗಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಅನುಸೂಯಾ ಹಿರೇಮಠ ಅವರು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ, ಶ್ರೀಯುತ ನರೇಂದ್ರ ಮೋದಿಯವರ ವಿಶೇಷ ಆಮಂತ್ರಿತರಾಗಿ ದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮೂರ ಬಾನುಲಿಗೆ ತಮ್ಮ ಸಂತಸ ಹಂಚಿಕೊಡರು.
ಪ್ರಧಾನ ಮಂತ್ರಿಗಳ ಹಲವು ಅಭಿವೃದ್ದಿ ಮತ್ತು ಜನಪರ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮೇರಿ ಮಾಠಿ-ಮೇರಾ ದೇಶ ಎಂಬ ವಿಶಿಷ್ಟ ಪ್ರಕಲ್ಪದಲ್ಲಿ ಅಮೃತವಾಟಿಕಾದ ನಿರ್ಮಾಣ, ಎನ್.ಎಸ್.ಎಸ್. ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಈ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಕ್ರೀಯವಾಗಿ ಭಾಗವಹಿಸಿ ವಿಶೇಷ ಸಾಧನೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಾರ್ಯಕ್ರಮ ನಿಯೋಜಕರಾದ ಶ್ರೀಮತಿ ಅನುಸೂಯಾ ಹಿರೇಮಠ ಮತ್ತು ಸರಕಾರಿ ಸರಸ್ವತಿ ಶಾಲೆಯ ಎಲ್ಲ ಉಪನ್ಯಾಸಕರಿಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹಾಗೂ ಇಲಾಖೆ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದ್ದಾರೆ .ವಿದ್ಯಾರ್ಥಿಗೆ ತರಬೇತಿ ನೀಡಿದ ಕೆರೂರ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಇಂತಹ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದ್ದಾರೆ. ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎನ್ನುವ ಆಶೆಯವನ್ನು ಶ್ರೀಶೈಲ ಕೋಲಾರ ನಮ್ಮೂರ ಬಾನುಲಿಗೆ ವ್ಯಕ್ತಪಡಿಸಿದರು.