ಬೆಂಗಳೂರಿನಲ್ಲಿ ವೀಲಿಂಗ್ ಪುಂಡರ ಹಾವಳಿ ಮಿತಿ ಮೀರಿದೆ, ಅದರಲ್ಲೂ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಡುವೆಯೇ ಪುಂಡರು ಭಯವಿಲ್ಲದೆ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಹಲವು ಸಂದರ್ಭಗಳಲ್ಲಿ ಇದು ಅಪಘಾತಕ್ಕೂ ಕಾರಣವಾಗುತ್ತದೆ.
ಪೊಲೀಸರು ಕೂಡ ಹಲವು ಪುಂಡರ ಹೆಡೆಮುರಿ ಕಟ್ಟಿದರೂ ಸಂಪೂರ್ಣವಾಗಿ ತೊಲಗಿಸಲು ಆಗಿಲ್ಲ. ಇದೀಗ ವೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಜನರೇ ಸೇರಿಕೊಂಡು ಬುದ್ದಿ ಕಲಿಸಿದ್ದಾರೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಕಮಾರನಹಳ್ಳಿ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು ಅಪಘಾತ ಮಾಡಿದ್ದಾರೆ. ವೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ಬಳಿಕ ಇತರ ವಾಹನಗಳ ಸವಾರರು ಸಿಟ್ಟಿಗೆದ್ದು ವೀಲಿಂಗ್ ಮಾಡುತ್ತಿದ್ದ ಬೈಕ್ಗಳನ್ನು ಫ್ಲೈಓವರ್ ನಿಂದ ಕೆಳಗೆ ಎಸೆದಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೆಲಮಂಗಲ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಇದೇ ಸರಿಯಾದ ಶಿಕ್ಷೆ ಎಂದ ಜನ
ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಲಿಂಗ್ ಮಾಡುವವರಿಗೆ ಇದೇ ರೀತಿ ಮಾಡಿದರೆ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದು ಎಂದಿದ್ದಾರೆ. ಪೊಲೀಸರು ಕೂಡ ಏನೂ ಮಾಡದೇ ಇದ್ದಾಗ ಜನರೇ ಇಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.