ಮೈಸೂರು: ಕ್ರಿಯಾಶೀಲ ಕವಯತ್ರಿ, ಶಿಕ್ಷಕಿ, ನಿರೂಪಕಿ ಶ್ರೀಮತಿ ಸುಮಾ ಪಂಚವಳ್ಳಿ ಅವರ ಸಾರಥ್ಯದಲ್ಲಿ ಮೈಸೂರಿನ ಪುರಭವನದಲ್ಲಿ ಶ್ರೀ ಮಾತಾ ಜನಪದ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಂಗವಾಗಿ ಮೂರು ಮಂದಿ ಪೌರ ಕಾರ್ಮಿಕ ಮಹಿಳೆಯರಾದ ಶ್ರೀಮತಿ ಹನುಮಂತಮ್ಮ, ಶ್ರೀಮತಿ ಮಂಜುಳಾ, ಶ್ರೀಮತಿ ದೀಪು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ‘ಹೂವಿನ ಜೊತೆಗೆ ನಾರು ಕೂಡ ಸ್ವರ್ಗಕ್ಕೆ…’ ಅನ್ನುವಂತೆ ಮುಖ್ಯ ಅತಿಥಿಯಾಗಿದ್ದ ನನಗೂ ಮತ್ತು ಕವಿಮಿತ್ರರಾದ ಆದಿಲ್ ಪಾಷ ಅವರಿಗೂ ಸನ್ಮಾನದ ಅದೃಷ್ಟ ಲಭಿಸಿತು. ಇದೊಂದು ಜೀವನದ ಸಾರ್ಥಕ ಕ್ಷಣವೆನಿಸಿತು.
ಜೊತೆಗೆ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಜರುಗಿ ಸಮಾರಂಭದ ಮೆರಗು ಹೆಚ್ಚಿಸಿದವು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಗದಗ ಜಿಲ್ಲೆಯ ಉಪನ್ಯಾಸಕರಾದ ವೀರನಗೌಡ ಮರಿಗೌಡರ, ಸಾಹಿತಿ ಎಂ.ವಿ. ರಮೇಶ್, ಪತ್ರಕರ್ತೆ ಮ.ನ. ಲತಾ ಮೋಹನ್, ಗಾಯಕ ಆದಿಲ್ ಪಾಷ, ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮಮ್ಮ, ಟ್ರಸ್ಟ್ ಅಧ್ಯಕ್ಷೆ ಸವಿತಾ ಶಾಸ್ತ್ರಿ, ಸಂಸ್ಥಾಪಕ ಕಾರ್ಯದರ್ಶಿ ಜೆ.ಜಿ. ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.
ಸಜಗೌ, ಮೈಸೂರು*