ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಪರಿಸರಸ್ನೇಹಿ ಗಣೇಶ ಮೂರ್ತಿಗೆ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ಗಣಪನ ಹಬ್ಬ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿ ಎಲ್ಲರೂ ಒಂದಾಗಿ ಹಬ್ಬದ ಆಚರಣೆಯನ್ನ ಮಾಡುತ್ತಾರೆ ಎಂದರೆ ತಪ್ಪಾಗಲಾರದು. ಇದುವೇ ನಮ್ಮ ಭಾರತ ದೇಶದ ಒಂದು ಸೌಂದರ್ಯ. ಸದ್ಯ ಅಂತಹ ಇನ್ನೊಂದು ನಿದರ್ಶನ ಈಗ ನಮ್ಮ ಕಣ್ಣ ಮುಂದಿದೆ.
ಹೌದು, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಸರಸ್ನೇಹಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಇದರ ಜೊತೆಗೆ, ಯಮಕನ ಮರಡಿ ಸಿಪಿಐ ಜಾವೇದ್ ಮುಷಾಪುರಿ ಮತ್ತು ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ ಕಾಲಿಮಿರ್ಚಿ ಅವರು ವಿನಾಯಕನ ಪ್ರತಿಷ್ಠಾಪನೆ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ.
ಇನ್ನು ನಮ್ಮ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರತಿವರ್ಷದಂತೆ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬ ಸಮೇತ ಪೂಜೆಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಪತ್ನಿ ಅಂಕಿತಾ, ಪುತ್ರ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.