ಎದುರಾಬದುರಾ ಕೂತು
ನಾವಿಬ್ಬರೂ ಎದುರಾಬದುರಾ ಕೂತು ಎಷ್ಟು ಶತಮಾನವಾಯಿತು ಆಗ ನೀನು ಆಡಿನಮರಿಯ ಹಾಗೆ ಛಂಗನೆ ಜಿಗಿಯುತ್ತಿದ್ದೆ ನನ್ನ ಮಡಿಲಿಗೆ ಹುಸಿಮುನಿಸು ಮಾಡಿ ಚಂಡು ಮುಂದೆ ಮಾಡಿ ಗುದ್ದಲು ಬರುತ್ತಿದ್ದೆ
ಪಾದ ಮುತ್ತುವ ಲಂಗವ ಎತ್ತಿಕಟ್ಟಿ ಕುಂಟಲಿಪಿ ಆಡುವಾಗ ನಾನು ನಿನ್ನ ಕೈಯ ಕಲ್ಲಾಗಿರುತ್ತಿದ್ದೆ ನಮ್ಮಿಬ್ಬರಿಗೇ ಕೇಳಿಸುವ ಹಾಗೆ ಮಾತನಾಡಿ ಎಷ್ಟು ವರ್ಷವಾಯಿತು ಈ ಮಳೆಗಾಲಕ್ಕಾದರೂ ಬಾ ಕಾಲುವೆ ಪಕ್ಕ ಕೂತು ನೀರಲಿ ಕಾಲು ಇಳಿಬಿಟ್ಟು ಹಾರುವ ಹಕ್ಕಿಗಳ ಎಣಿಸೋಣ
ನಿನ್ನ ಕೋಲಾಟದ ಸೊಬಗು ಮರೆತಿಲ್ಲ ನಾನು ಮಳಬಿಲ್ಲನುಟ್ಟು ನವಲುಗರಿಯ ತಲೆಯಲಿಟ್ಟು ಹಗಲು ಚಂದಿರನಂಥ ಸೊಂಟಕ್ಕೆ ಡಾಬು ಕಟ್ಟಿ ಎಳೆಚಿಗುರ ಹೂಗಳ ಮಂಟಪದಲ್ಲಿ ಕುಣಿಯುತ್ತಿದ್ದೆ ನನ್ನ ನೋಡಿ ಅಪರಂಪಾರ ನಗುತ್ತಿದ್ದೆ ಬಹುಶಃ ನೀನು ಮರೆತಿರಬಹುದು
ಎದುರಾಬದುರಾ ಕೂತು… ಅಲ್ಲಿ ಅದೇ ಕೆರೆಯ ದಂಡೆಯ ಮೇಲೆ ಈಗಲೂ ಕೂತಿದ್ದೇನೆ ಗಡ್ಡ ಹಣ್ಣಾಗಿವೆ ದನಿಯಲಿ ನೀ ಬಯಸುವ ಕಂಪಿಲ್ಲ ಎದೆಯಲ್ಲಿ ಪ್ರೀತಿ ಆಲದ ಮರವಾಗಿದೆ ಏನೆಲ್ಲ ಮಾತಾಡೋಕಿದೆ ಆದರೆ ನೀ ಬರುವ ಖಾತರಿಯಿಲ್ಲ
ಎದುರಾಬದುರಾ ಕೂತು ಎಷ್ಟು ಜನ್ಮವಾಯಿತು ಈಗಲೂ ಕೂತಿದ್ದೇನೆ… ಅಲ್ಲೇ… ನಿನಗಾಗಿ ಕಾಯುತ್ತಾ…
– ವೀರಣ್ಣ ಮಡಿವಾಳರ