ಬೆಳಗಾವಿ: ಗಣಪತಿ ಬಪ್ಪ ಮೋರಯಾ ಪುಡುಚ ವರ್ಷಿ ಲೌಕರ ಯಾ ಎನ್ನುವ ಜೈಕಾರದೊಂದಿಗೆ, ಕಳೆದ 11 ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕ ಮಂಡಳಿಗಳು ಹಾಗೂ ತಮ್ಮ ತಮ್ಮ ಮನೆ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಭಕ್ತರೆಲ್ಲರೂ, ಮಂಗಳವಾರ ಗಣಪನಿಗೆ ವಿದಾಯ ಹೇಳಿದರು.
ನಗರದಲ್ಲಿ 360ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನ ಪ್ರತಿಷ್ಠಾಪಿಸಲಾಗಿತ್ತು. ಬೆಳಗಾವಿ ಅಷ್ಟೇ ಅಲ್ಲದೆ ಪಕ್ಕದ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಗಣಪನ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತಿತ್ತು. ಎಂದಿನಂತೆ ಅತಿ ವಿಜ್ರಂಭಣೆಯಿಂದ ಈ ವರ್ಷವೂ ಗಣಪನನ್ನು ಆದರ, ಸತ್ಕಾರ, ಭಕ್ತಿಯಿಂದ ಬರಮಾಡಿಕೊಂಡಿದ್ದರು. ಇನ್ನು 11 ದಿನಗಳ ಭಕ್ತಿಯಿಂದ ಧಾರ್ಮಿಕ ವಿಧಿ ಕೈಗೊಂಡ ಭಕ್ತರು , ಅದೇ ಸಂತೋಷದಿಂದ ಮೋದಕ ಪ್ರಿಯ ಗಣಪನಿಗೆ ಬೀಳ್ಕೊಟ್ಟರು.
ಬೆಳಗಾವಿ ನಗರದ ಹುತಾತ್ಮ ಚೌಕದಿಂದ ಸಂಜೆ 5:30ಕ್ಕೆ ಆರಂಭಗೊಂಡ ಸಾರ್ವಜನಿಕ ಮೂರ್ತಿಗಳ ಭವ್ಯ ಮೆರವಣಿಗೆ, ರಾಮದೇವ್ ಗಲ್ಲಿ, ಸಮಾದೇವಿ ಗಲ್ಲಿ, ಎಂಡೆಕೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗ ಕಿಂಡದ ಗಲ್ಲಿ ರಸ್ತೆ, ತಿಲಕ ಚೌಕ, ಹೇಮು ಕಾಲೋನಿ ಚೌಕ, ಪಾಟೀಲ ಗಲ್ಲಿಯ ಶನಿಮಂದಿರ, ಕಪಿಲೇಶ್ವರ ರೈಲ್ವೆ ಮಾರ್ಗವಾಗಿ ಸಾಗಿ ಕಪಿಲೇಶ್ವರ ದೇವಸ್ಥಾನದ ಬಳಿ ಇರುವಂತಹ ಹೊಂಡಕ್ಕೆ ಬಂದು ತಲುಪಿದವು. ಮೆರವಣಿಗೆ ಉದ್ದಕ್ಕೂ ರೂಪಕಗಳು ವಿವಿಧ ಕಲಾತಂಡಗಳು ಕಣ್ಮನಗಳನ್ನ ಸೆಳೆದವು.