ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ, ಪುಂಡರ ಕಾಟ ಹೆಚ್ಚಾಗುತ್ತಿದೆ. ಸಣ್ಣಪುಟ್ಟ ವ್ಯಾಜ್ಯಗಳಿಗೂ ಯುವಕರು ಕೊಲೆ ಮಾಡುವ ಹಂತಕ್ಕೆ ಇಳಿಯುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕದಿದ್ದರೆ, ಮುಂದೆ ಜಿಲ್ಲೆಗೆ ಇದು ದೊಡ್ಡ ತಲೆನೋವಾಗಬಹುದು. ಇದಕ್ಕೆ ಬೆಳಗಾವಿ ಪೊಲೀಸರು, ಕಠಿಣ ಲಗಾಮು ಹಾಕಬೇಕು.
ಮೊನ್ನೆ ತಾನೆ ಗಣಪತಿ ವಿಸರ್ಜನೆ ಸಮಯದಲ್ಲಿ, ವೈಯಕ್ತಿಕ ಕಾರಣಕ್ಕಾಗಿ ಚಾಕು ಚುಚ್ಚಾಟ ನಡೆದಿತ್ತು. ಈದ್ ಮಿಲಾದ್ ಹಬ್ಬದ ದಿನವೂ ಸಹ ಇದೇ ರೀತಿ ಕಾರಣಕ್ಕಾಗಿ ಚಾಕುವನ್ನ ಚಲಾಯಿಸಲಾಯಿತು. ಅದೇ ರೀತಿ ಇಂದು ಕ್ಷುಲ್ಲಕ ಕಾರಣಕ್ಕಾಗಿ, ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ದೊಡ್ಡ ಮಾರಮಾರಿಯಾಗಿದೆ. ವಿದ್ಯಾರ್ಥಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
ಬೆಳಗಾವಿಯ ಕಾಲೇಜು ರಸ್ತೆಯ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಗಲಾಟೆ ಆಗಿದೆ. ಒಂದು ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳು, ಅವರ ಕಾಲೇಜಿನ ಬಗ್ಗೆ ಅವಹೇಳನಕಾರಿ ರೂಲ್ಸ್ ಅನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೇ ವಿಚಾರಕ್ಕೆ ಹೊಡೆದಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಗಲಾಟೆ ವೇಳೆ ಓಡಾಡಿದ ದೃಶ್ಯ, ಹಲ್ಲೆ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸರಿಯಾಗಿದೆ. ಗಾಯಾಳು ವಿದ್ಯಾರ್ಥಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇನ್ನೇನು ಕ್ರಮ ಕೈಗೊಳ್ಳುತ್ತಾರೆ, ಕಾದು ನೋಡಬೇಕಿದೆ.