Live Stream

[ytplayer id=’22727′]

| Latest Version 8.0.1 |

State News

ಇಡೀ ದೇಶಕ್ಕೇನೆ ಮಾದರಿ ನಮ್ಮ ಕರ್ನಾಟಕದ ಈ ಗ್ರಾಮ

ಇಡೀ ದೇಶಕ್ಕೇನೆ ಮಾದರಿ ನಮ್ಮ ಕರ್ನಾಟಕದ ಈ ಗ್ರಾಮ

ಕೊಪ್ಪಳ: ಜಿಲ್ಲೆಯಿಂದ 15 ಕಿ.ಮೀ. ದೂರದಲ್ಲಿ ಕಾಮನೂರು ಎಂಬ ಗ್ರಾಮವಿದೆ. ಸುಮಾರು 2200 ಜನಸಂಖ್ಯೆ ಇರುವ ಈ ಊರಲ್ಲಿ ಎಲ್ಲಾ ಸಮುದಾಯದ ಜನರೂ ಇದ್ದಾರೆ. ಇಂಥ ಗ್ರಾಮಗಳು ನಾಡಿನ ತುಂಬಾ ಇವೆಯಲ್ಲ; ಇದರಲ್ಲೇನು ವಿಶೇಷ ಅಂದಿರಾ? ಹೌದು ಇಲ್ಲೊಂದು ವಿಶೇಷವಿದೆ. ಕಾಮನೂರಿನಲ್ಲಿ ಪೆಟ್ಟಿಗೆ ಅಂಗಡಿಗಳಿವೆ, ಪ್ರಾವಿಶನ್‌ ಸ್ಟೋರ್‌ಗಳಿವೆ. ಆದರೆ ಇಲ್ಲಿ ಬೀಡಿ- ಸಿಗರೇಟ್‌, ಗುಟ್ಕಾ ಸಿಗುವುದಿಲ್ಲ. ಹೋಟೆಲುಗಳೂ ಇಲ್ಲ. ಮದ್ಯದಂಗಡಿಯನ್ನ ತೆರೆಯಲು ಈ ಊರಿನ ಜನ ಅವಕಾಶವನ್ನೇ ಕೊಟ್ಟಿಲ್ಲ! ಇದರ ಪರಿಣಾಮ, ಕಾಮನೂರು ಒಂದು “ಕ್ರಾಂತಿಯ ಊರು’ ಎಂದೇ ಹೆಸರಾಗಿದೆ. ಗಾಂಧೀಜಿಯ ಬದುಕಿನ ಆದರ್ಶವನ್ನ ಅಳವಡಿಸಿಕೊಂಡಿರುವ ಕಾಮನೂರಿನ ಗ್ರಾಮಸ್ಥರು ಕೃಷಿ ಮಾಡುತ್ತಲೇ ಸಂಭ್ರಮದ ಬದುಕು ಕಟ್ಟಿಕೊಂಡಿದ್ದಾರೆ. “ಶ್ರಮ ಜೀವನ ಸುಂದರ ಬದುಕಿಗೆ ದಾರಿ” ಎಂಬ ಮಾತಿಗೆ ಈ ಊರಿನ ಜನರು ಸಾಕ್ಷಿಯಾಗಿದ್ದಾರೆ.

ಕಾಮನೂರಿನಲ್ಲಿ ಇಂಥದೊಂದು ಬದಲಾವಣೆಯ ಗಾಳಿ ಬೀಸಿದ್ದು ಯಾವಾಗ? ಎಂದು ಕೇಳಿದರೆ, ಆ ಊರಿನ ಜನ 25 ವರ್ಷಗಳ ಹಿಂದೆ, ಅನ್ನುತ್ತಾರೆ. 90ರ ದಶಕದ ಕೊನೆಯ ಭಾಗದಲ್ಲಿ ಈ ಊರಿನ ಅಂಗಡಿಗಳಲ್ಲೂ ಬೀಡಿ-ಸಿಗರೇಟು, ಗುಟ್ಕಾ ಸಿಗುತ್ತಿತ್ತು. ಸಾರಾಯಿ ಅಂಗಡಿ ಇತ್ತು. ಹೋಟೆಲುಗಳೂ ಇದ್ದವು. ಊರಿನ ಗಂಡಸರು ಹೆಂಗಸರನ್ನು ದುಡಿಯಲು ಹಚ್ಚಿ ತಾವು ಧಮ್‌ ಎಳೆಯುತ್ತ, ಗುಟ್ಕಾ ಅಗಿದು ಎಲ್ಲೆಂದರಲ್ಲಿ ಉಗಿಯುತ್ತ, ಸಾರಾಯಿ ಕುಡಿಯುತ್ತ, ಹೋಟೆಲಿನಲ್ಲಿ ಕುಳಿತು ಹರಟುತ್ತ ಟೈಮ್‌ ಪಾಸ್‌ ಮಾಡತೊಡಗಿದ್ದರು. ಈ ದುಶ್ಚಟಗಳಿಂದ ಊರಿನ ಜನ ಹಣ, ಆರೋಗ್ಯ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗುವುದನ್ನು ತಪ್ಪಿಸಬೇಕು ಎಂದು ಯೋಚಿಸಿದ ಕಾಮನೂರಿನ ಕೆಲ ವಿದ್ಯಾವಂತರು ಮತ್ತು ಹಿರಿಯರು ಒಂದು ನಿರ್ಧಾರಕ್ಕೆ ಬಂದರು. ಒಟ್ಟಿಗೆ ಹೊರಟ ಈ ಗುಂಪು- ಸಾರಾಯಿ ಅಂಗಡಿ, ಹೋಟೆಲ್‌ ಮತ್ತು ಬೀಡಿ-ಸಿಗರೇಟು, ಗುಟ್ಕಾ ಮಾರುತ್ತಿದ್ದ ಅಂಗಡಿಗಳಿಗೆ ಹೋಗಿ ಇದ್ದ ವಿಷಯ ತಿಳಿಸಿತು. ಇನ್ನುಮುಂದೆ ಸಾರಾಯಿ ಅಂಗಡಿ ಮತ್ತು ಹೋಟೆಲ್‌ಗ‌ಳನ್ನ ಮುಚ್ಚಬೇಕೆಂದೂ, ಅಂಗಡಿಗಳಲ್ಲಿ ಬೀಡಿ- ಸಿಗರೇಟು, ಗುಟ್ಕಾ ಮಾರುವಂತಿಲ್ಲವೆಂದೂ ಸೂಚಿಸಿತು. ಈ ಮಾತಿಗೆ ಮೊದಮೊದಲು ಮಾರಾಟಗಾರರು ವಿರೋಧ ವ್ಯಕ್ತಪಡಿಸಿದರು. ಆದರೆ ಊರ ಜನರ ಗಟ್ಟಿ ಧ್ವನಿಗೆ ಗೌರವ ಕೊಟ್ಟು ಒಪ್ಪಿಕೊಂಡರು. ಅಂಗಡಿಗಳಲ್ಲಿ ಬೀಡಿ-ಸಿಗರೇಟ್‌, ಗುಟ್ಕಾ ಮಾರುವುದು ಕಂಡುಬಂದರೆ 1000 ರೂಪಾಯಿ ದಂಡ ವಿಧಿಸಲು, ಆ ಹಣವನ್ನು ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಬಳಸುವುದೆಂದೂ ಈ ಸಂದರ್ಭದಲ್ಲಿಯೇ ತೀರ್ಮಾನಿಸಲಾಯಿತು.

ಅಂದಿನಿಂದ ಈ ಊರಿನಲ್ಲಿ ಬೀಡಿ-ಸಿಗರೇಟ್‌, ಗುಟ್ಕಾ ಮಾರುತ್ತಿಲ್ಲ. ಹೋಟೆಲುಗಳು ಶುರುವಾಗಿಲ್ಲ. ಸಾರಾಯಿ ಸಾಗಣೆ ಮಾಡಲು ಬಂದ ಅಬಕಾರಿ ಇಲಾಖೆಯ ಜೀಪನ್ನು ಊರಿನ ಜನ ವಾಪಸ್‌ ಕಳಿಸಿದ್ದಾರೆ. ಬೀಡಿ-ಸಿಗರೇಟ್‌, ಗುಟ್ಕಾ, ಮದ್ಯ ಬೇಕೆನ್ನುವವರು ಪಕ್ಕದ ಊರುಗಳಿಗೆ ಹೋಗಿ ಬರಬೇಕು. ಹಾಗೆ ಹೋಗಿ ಬಂದವರನ್ನ ಊರ ಜನ ನಿಕೃಷ್ಟವಾಗಿ ನೋಡುವುದರಿಂದ, ದುಶ್ಚಟಗಳ ಹಿಂದೆ ಬಿದ್ದವರ ಸಂಖ್ಯೆ ಬಹಳ ಕಡಿಮೆ ಎಂಬುದು ಕಾಮನೂರಿನ ಹಿರಿಯರ ಮಾತು. ಊರಿನ ಹಿರಿಯರು ಮತ್ತು ಯುವಕರ ಗಟ್ಟಿ ನಿರ್ಧಾರದಿಂದ ಕಾಮನೂರು ದುಶ್ಚಟ ಮುಕ್ತ ಗ್ರಾಮವಾಗಿ ಉಳಿದಿದೆ. ಇದು ಮಹಿಳೆಯರಾದ ನಮಗೆ ತುಂಬಾ ಖುಷಿ ಕೊಡುವ ವಿಚಾರ. ಕುಟುಂಬದ ಸದಸ್ಯರೇ ನೆಮ್ಮದಿಯಿಂದ ಬದುಕುವ ವಾತಾವರಣ ಈ ಊರಲ್ಲಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ಸಿದ್ದಮ್ಮ ಈಶಪ್ಪ ಬಂಗಾರಿ ಸಂಭ್ರಮಿಸುತ್ತಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";