ಬೆಳಗಾವಿ: ನಗರದಲ್ಲಿ ನವೆಂಬರ್ 1 ರಂದು, ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಕುರಿತು ತೀರ್ಮಾನವನ್ನ ಮಂಗಳವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸರತಿಯ ದೀಪಾವಳಿ ಹಬ್ಬವು ಸಹ ನ.1 ರಂದೇ ಬಂದಿರುವ ಕಾರಣ, ಅಂದು ಸಾಂಕೇತಿಕವಾಗಿ ಕಾರ್ಯಕ್ರಮವನ್ನ ನಡೆಸಿ, ನ.3 ರಂದು ಮೆರವಣಿಗೆ ಆಯೋಜಿಸಬೇಕು ಎಂದು ಯುವಕ ಸಂಘಟನೆಗಳ ಮುಖಂಡರು ಒತ್ತಾಯಿಸಿದಾಗ, ಇದಕ್ಕೆ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ರಮೇಶ ಸೊಂಟಕ್ಕಿ ಹಾಗೂ ಮತ್ತಿರರು ಆಕ್ಷೇಪ ವ್ಯಕ್ತಪಡಿಸಿ, “ಯಾವ ಕಾರಣಕ್ಕೂ ರಾಜ್ಯೋತ್ಸವದ ಮೆರವಣಿಗೆ ದಿನವನ್ನ ಮುಂದೂಡುವಂತಿಲ್ಲ. ಬೇಕಿದ್ದರೆ, ಮೆರವಣಿಗೆಯ ಸಮಯವನ್ನ ವಿಸ್ತರಿಸಿ ಎಂದರು. ಈ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ನ.1 ರಂದೇ ರಾಜ್ಯೋತ್ಸವದ ಭವ್ಯ ಮೆರವಣಿಗೆಯನ್ನೂ ನಡೆಸುವ ನಿರ್ಧಾರವನ್ನ ಮಾಡಿ ಪ್ರಕಟಣೆ ನೀಡಿದರು.
ದೀಪಾವಳಿ ಹಬ್ಬವೂ ಇದೆ ಸಂಧರ್ಭದಲ್ಲಿ ಬಂದ ಕಾರಣ ಈ ಸಲದ ರಾಜ್ಯೋತ್ಸವದ ಮೆರವಣಿಗೆಯನ್ನ ಅದ್ಧೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿ, ಈ ಮೆರವಣಿಗೆ ಹಾಗೂ ಸಂಭ್ರಮದ ವಿಶೇಷತೆಗಳನ್ನ ವೀಕ್ಷಿಸಲು, ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ಮಾಡಲಾಗುವುದು ಹಾಗೂ ಬೆಳಗಾವಿಯನ್ನ ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಡಿದ ಮಹನೀಯರ ಭಾವಚಿತ್ರಗಳನ್ನ ಪ್ರದರ್ಶಿಸಲಾಗುವುದು ಎಂದರು.
ಹೋರಾಟಗಾರರು ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಗುವುದು. ಇದಕ್ಕಾಗಿ ಸಾಧಕರ ಆಯ್ಕೆಗಾಗಿ ಜಿಲ್ಲಾ ಪಂಚಾಯತಿ ಸಿ ಇ ಓ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಹೆಲಿಕ್ಯಾಪ್ಟರ್ ನಿಂದ ಚೆನ್ನಮ್ಮನ ಪ್ರತಿಮೆಗೆ ಪುಷ್ಪರುಷ್ಟಿ ಮಾಡಲು ಯತ್ನಿಸಲಾಗುವುದು ಎಂದು ತಿಳಿಸಿದರು.
ಕೇಳಿ ಬಂದ ಬೇಡಿಕೆಗಳು
1. ಮೈಸೂರು ದಸರಾ ಮಾದರಿಯಲ್ಲಿ ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ಕೊಡಬೇಕು.
2. ಮೆರವಣಿಗೆ ವೀಕ್ಷಣೆಗೆ ಬರುವವರಿಗೆ ಊಟದ ವ್ಯವಸ್ಥೆ ಮಾಡಬೇಕು.
3. ಸರಕಾರಿ ಸರದಾರ ಪ್ರೌಢಶಾಲೆ ಮೈದಾನದಲ್ಲಿ ನ. 2 ರಂದು ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು.
4. ನಾಮಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಕನ್ನಡ ಕಡೆಗೆಣಿಸಿದವರ ವಿರುದ್ಧ ಕಠೋರ ಕ್ರಮವಾಗಬೇಕು.
ಈ ಸಂಧರ್ಭದಲ್ಲಿ, ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ್ ಗುಳೇದ, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಪ್ರೋಬೇಷನರಿ ಐಎಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ ಹಾಗೂ ಇತರ ಕನ್ನಡ ಪರ ಹೋರಾಟಗಾರರು, ವಿವಿಧ ಸಂಘದವರು ಉಪಸ್ಥಿತರಿದ್ದರು.