ಬೆಂಗಳೂರು: ನಗರ ಜಿಲ್ಲೆಯ ಆನೇಕಲ್ನಲ್ಲಿ ಅಮಾನವೀಯ ಘಟನೆ ನಡೆದಿದೆ. ವರ್ಷದ ಹಸುಗೂಸನ್ನ ಮನೆಯ ನೀರಿನ ಸಿಂಟೆಕ್ಸ್ ಟ್ಯಾಂಕ್ ಗೆ ಎಸೆದು ಕೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ. ಚಂದಾಪುರ ಸಮೀಪದ ಇಗ್ಗಲೂರಿನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ಇದು ವರದಿಯಾಗಿದೆ.
ಮನು ಮತ್ತು ಹರ್ಷಿತಾ ದಂಪತಿಗೆ ಸೇರಿದ ಈ ಮಗು ಓವರ್ಹೆಡ್ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ಹರ್ಷಿತಾ ಗರ್ಭಿಣಿಯಾದಾಗ ಆಗಿದ್ದ ಸಮಸ್ಯೆಯಿಂದಾಗಿ ಆರೂವರೆ ತಿಂಗಳಿಗೆ ಮಗುವನ್ನು ಸಿಜೇರಿಯನ್ ಮೂಲಕ ಹೊರತೆಗೆಯಲಾಗಿತ್ತು. ಆ ಬಳಿಕ ಉಸಿರಾಟದ ತೊಂದರೆ ಎದುರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಹಂತದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು.
ಆದರೆ, ನ.4 ರಂದು ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಮಧ್ಯಾಹ್ನ 12:45 ರ ಸುಮಾರಿಗೆ ಮಗು ನಾಪತ್ತೆಯಾಗಿದ್ದು ಗೊತ್ತಾಗಿದೆ. ಸುತ್ತಮುತ್ತ ಎಷ್ಟೇ ಹುಡುಕಾಡಿದರು ಮಗು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಸೂರ್ಯನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರ ಪರಿಶೀಲನೆ ವೇಳೆ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್ ನಲ್ಲಿ ಮಗು ಶವ ಪತ್ತೆಯಾಗಿದೆ. ಮಗುವಿನ ಪೋಷಕರು ಅಂತರ್ಜಾತಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹದ ವೈಷಮ್ಯಕ್ಕೆ ಮಗುವನ್ನ ಕೊಂದಿರುವ ಆರೋಪ ಮಾಡಲಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾವು ಇಲ್ಲಿನ ಮೂಲ ನಿವಾಸಿಗಳು. ಮನೆ ವಿಷ್ಯ ಸಂಪೂರ್ಣವಾಗಿ ಗೊತ್ತಿರುವ ವ್ಯಕ್ತಿ ಮಾಡಿರುವ ಸಾಧ್ಯತೆ ಇದೆ. ಮುರಳಿ ಬೆಳಗ್ಗೆ 8.15ಕ್ಕೆ ಡ್ಯೂಟಿಗೆ ಹೋಗಿದ್ದಾನೆ. ಮನು 12 ಗಂಟೆಯವರೆಗೂ ಮನೆಯಲ್ಲಿದ್ದಾನೆ. 12.15ಕ್ಕೆ ಮಗು ಇಲ್ಲ. ಇದನ್ನ ಮನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರುವ ವ್ಯಕ್ತಿಯೇ ಮಾಡಿರುವ ಸಾಧ್ಯತೆ ಇದೆ. ಇವತ್ತು ಮುರಳಿ ಅವರ ಪತ್ನಿ ಮನೆಯಲ್ಲಿಲ್ಲ. ಬರೀ ಐದು ನಿಮಿಷದಲ್ಲೇ ಮಗು ಇಲ್ಲ ಅಂದ್ರೆ ಇದು ಅಚ್ಚರಿ ವಿಷಯ ಎಂದು ಸ್ಥಳೀಯ ನಿವಾಸಿ ಸ್ಟುಡಿಯೋ ನಾಗೇಶ್ ಹೇಳಿದ್ದಾರೆ.
ನನ್ನ ಭಾಮೈದ ಒಂದು ವರ್ಷದ ರೆಡ್ಡಿ ಜನಾಂಗದಲ್ಲಿ ಮದುವೆಯಾಗಿದ್ದ. ಅದಕ್ಕೂ ಮುನ್ನ ಮೂರು ವರ್ಷಗಳ ಕಾಲ ಇದರ ಬಗ್ಗೆ ಭಾರೀ ಕೋಲಾಹಲವಾಗಿತ್ತು. ಬಳಿಕ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾದ ಬಳಿಕ, ಮೇಜರ್ ಆಗಿರುವ ಕಾರಣ ಇವರಿಬ್ಬರಿಗೂ ಮದುವೆ ಆಗಿತ್ತು. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದರು ಎಂದು ಮೃತ ಶಿಶುವಿನ ತಾತ ನಾಗೇಶ್ ಹೇಳಿದ್ದಾರೆ.