ಬೆಂಗಳೂರು: ಇಲ್ಲಿನ ಸಾರ್ವಜನಿಕರಿಗೆ ಪ್ರಯಾಣ ಸೇವೆ ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ನಲ್ಲಿ ಚಾಲನೆ ಮಾಡುತ್ತಿದ್ದ ಡ್ರೈವರ್ಗೆ ದಿಢೀರ್ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ಕಂಡಕ್ಟರ್ನ ಸಮಯಪ್ರಜ್ಞೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರ ಜೀವ ಉಳಿದರೂ, ಅಷ್ಟರಲ್ಲೆ ದುರಂತವೊಂದು ಸಂಭವಿಸಿತ್ತು.
ಹೌದು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲನಿಗೆ ದಿಡೀರ್ ಹೃದಯಾಘಾತ ಸಂಭವಿಸಿದ್ದು, ಬಸ್ ಚಾಲನೆ ಮಾಡುವಾಗಲೇ ಸಾವನ್ನಪ್ಪಿದ್ದಾರೆ. ಡ್ರೈವರ್ ಪಕ್ಕದಲ್ಲಿ ಕಂಡಕ್ಟರ್ ನಿಂತುಕೊಂಡು ಮಾತನಾಡುತ್ತಿದ್ದು, ಮಾತಿನ ನಡುವೆಯೇ ಈ ಘಟನೆ ಸಂಭವಿಸಿದೆ. ಬಸ್ನ ಚಾಲಕ ಗೇರ್ ಬಾಕ್ಸ್ ಮೇಲೆ ಕುಸಿದು ಬೀಳುತ್ತಿದ್ದಂತೆ ಆತನನ್ನ ಕೂಗಿ ಎದ್ದೇಳಿಸಲು ಮುಂದಾದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕ್ಷಣಾರ್ಧದಲ್ಲಿ ಮುಂದೆ ನಿಂತಿದ್ದ ಇನ್ನೊಂದು ಬಿಎಂಟಿಸಿ ಬಸ್ಗೆ ಹೃದಯಾಘಾತವಾಗಿ ಬಿದ್ದ ಚಾಲಕನ ಬಸ್ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿದೆ.
ಇಲ್ಲಿ ಏನೋ ಅವಘಡ ಸಂಭವಿಸಿದೆ ಎಂಬುದನ್ನು ಅರಿತ ಕಂಡಕ್ಟರ್ ಕೂಡಲೇ ಡ್ರೈವರ್ನ ಸ್ಥಳಕ್ಕೆ ಬಂದು ಸ್ಟೇರಿಂಗ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಡ್ರೈವರ್ನ ಪಕ್ಕಕ್ಕೆ ಸರಿಸಿ ಬ್ರೇಕ್ ಒತ್ತಿ ಬಸ್ ಅನ್ನು ನಿಲ್ಲಿಸಿದ್ದಾರೆ. ಈ ಮೂಲಕ ಎಲ್ಲ ಪ್ರಯಾಣಿಕರ ಜೀವವನ್ನು ಕಾಪಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಒಂದು ದುರಂತ ನಡೆದಿದ್ದು, ಸೀಟಿನಲ್ಲಿಯೇ ಕುಸಿದುಬಿದ್ದ ಡ್ರೈವರ್ ಅನ್ನು ನೀರು ಹಾಕಿ ಎಬ್ಬಿಸಲು ಹಾಗೂ ಹೃದಯವನ್ನು ಪಂಪ್ ಮಾಡಿ ಎಬ್ಬಿಸಲು ಎಷ್ಟೇ ಪ್ರಯತ್ನ ಮಾಡಿದರೂ ಆತ ಮೇಲೇಳಲೇ ಇಲ್ಲ. ಡ್ರೈವರ್ನ ಪ್ರಾಣಪಕ್ಷಿ ಕಾರ್ಡಿಯಾಕ್ ಅರೆಸ್ಟ್ ಆಗುವ ಮೂಲಕ ಹಾರಿಹೋಗಿತ್ತು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಬಸ್ಸಿನ ವಿವರ ಮತ್ತು ಚಾಲಕನ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಸಂಸ್ಥೆಯು, ದಿನಾಂಕ 06.11.2024ರಂದು ಎಂದಿನಂತೆ ವಾಹನ ಸಂಖ್ಯೆ ಕೆಎ-57 ಎಫ್-4007 ಮಾರ್ಗ ಸಂಖ್ಯೆ 256 ಎಂ/1 ಕೊನೆಯ ಸುತ್ತುವಳಿಯಲ್ಲಿ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ತೆರಳುವಾಗ ಕಿರಣ್ ಕುಮಾರ್ (ಬಿಲ್ಲೆ ಸಂಖ್ಯೆ 24921) ಅವರು ಹೃದಯಾಘಾತವಾಗಿ ತಕ್ಷಣ ಚಾಲಕರ ಸಿಟಿನಿಂದ ಕೆಳಗೆ ಉರುಳಿದ್ದಾರೆ. ತಕ್ಷಣವೇ ಬಸ್ಸಿನಲ್ಲೇ ಇದ್ದ ನಿರ್ವಾಹಕ ಓಬಳೇಶ್, ಬಿಲ್ಲೆ ಸಂಖ್ಯೆ 21448 ರವರು ಬಸ್ಸನ್ನು ಯಾವುದೇ ಅಪಘಾತ ಮತ್ತು ಪ್ರಾಣಹಾನಿಗೆ ಅವಕಾಶ ಮಾಡಿಕೊಡದೆ ತ್ವರಿತವಾಗಿ ನಿಲ್ಲಿಸಿದ್ದಾರೆ. ಚಾಲಕರನ್ನು ಹತ್ತಿರವೇ ಇದ್ದ ವಿ.ಪಿ.ಮ್ಯಾಗ್ನಸ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಚಾಲಕರನ್ನು ಪರೀಕ್ಷಿಸಿ, ಸದರಿಯವರು ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ತಿಳಿಸಿರುತ್ತಾರೆ.
ಸಂಸ್ಥೆಯು ಘಟಕ 40ರ ಕಿರಣ್ ಕುಮಾರ್, ಚಾಲಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಸದರಿಯವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಸಂಸ್ಥೆಯ ಅಧಿಕಾರಿಗಳು ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ , ಎಕ್ಸ್ ಗ್ರೇಷಿಯಾ ಮೊತ್ತವನ್ನು ಚಾಲಕರ ಅಂತ್ಯ ಸಂಸ್ಕಾರಕ್ಕಾಗಿ ನೀಡಲಾಗುದೆ ಎಂದು ತಿಳಿಸಿದೆ.