Live Stream

[ytplayer id=’22727′]

| Latest Version 8.0.1 |

Local NewsNational NewsState News

ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದಲ್ಲಿ ಚಾರಣ ಹಾಗೂ ಸಸ್ಯಾನುಭವ ಕಾರ್ಯಕ್ರಮ

ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದಲ್ಲಿ ಚಾರಣ ಹಾಗೂ ಸಸ್ಯಾನುಭವ ಕಾರ್ಯಕ್ರಮ

 

ಕಪ್ಪತಗುಡ್ಡ: ಇಲ್ಲಿನ ಶ್ರೀ ನಂದಿವೇರಿ ಮಠ ಪ್ರಾಯೋಜಿತ 6 ನೆ ಚಾರಣ ಹಾಗೂ ಸಸ್ಯಾನುಭವ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸನ್ನಿಧಿಯಲ್ಲಿ ಅತ್ಯುತ್ಸಾಹದಿಂದ ಜರುಗಿತು. ನೂರೈವತ್ತಕ್ಕೂ ಹೆಚ್ಚು ಚಾರಣಿಗರು ಭಾಗವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪರಿಸರ ಸಂರಕ್ಷಕ ಶಂಕರ ಕಂಬಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಚಾರಣದಪಥ, ಕಪ್ಪತಗುಡ್ಡದ ಪರಿಸರದ ಮಹತ್ವ, ಕಪ್ಪತಗುಡ್ಡ ಸಂರಕ್ಷಣೆಯ ಕುರಿತ ಕಿರುಪರಿಚಯವನ್ನು ಹಾಗೂ ಚಾರಣದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಪೂಜ್ಯ ಸ್ವಾಮೀಜಿಯವರು ವಿವರಿಸಿದರು.

‘ನಮ್ಮೆಲ್ಲರ ನಡೆ – ಕಪ್ಪತಗುಡ್ಡದ ಕಡೆ’ ಎಂದು ಮುಗಿಲುಮುಟ್ಟುವ ಜಯಘೋಷದೊಂದಿಗೆ ಬೆಳಿಗ್ಗೆ ಹತ್ತು ಘಂಟೆಗ ಪ್ರಾರಂಭಗೊಂಡ ಚಾರಣದಲ್ಲಿ ಪೂಜ್ಯ ಶ್ರೀ ಗಳು ಮತ್ತು ಸಸ್ಯಶಾಸ್ತ್ರಜ್ಞ ಡಾ. ಬಿ.ಡಿ.ಹುದ್ದಾರ ರವರು ವಿವಿಧ ಸಸ್ಯಗಳನ್ನು ಗುರುತಿಸಿ ಅವುಗಳ ಗುಣಲಕ್ಷಣ ಮತ್ತು ಆಯುರ್ವೇದದಲ್ಲಿ ಅವುಗಳ ಉಪಯುಕ್ತತೆ ಕುರಿತು ಸಮಗ್ರ ಮಾಹಿತಿ ತಿಳಿಸಿದರು.

ಬ್ಯಾಂಕ್ ಆಫ್ ಬರೋಡಾದ ರಾಮದುರ್ಗ ಶಾಖೆಯ ವ್ಯವಸ್ಥಾಪಕ ಶ್ರೀ ಹನಮಂತ ಬಿರಾದಾರರವರು ರಿಸರ ಸಂರಕ್ಷಣೆ ಕುರಿತು ಮಾತನಾಡುತ್ತಾ ಯುವಕರನ್ನು ಹುರಿದುಂಬಿಸಿದರು.

ಶ್ರೀ ಶಿವಕುಮಾರ ಮಹಾಸ್ವಾಮಿಗಳ ಈ ಜನಾಂದೋಲನದಲ್ಲಿ ತನು, ಮನ, ಧನದೊಂದಿಗೆ ಸಹಕರಿಸುವುದಾಗಿ ತಿಳಿಸಿದರು.
ಘನ ಕಾನನದ ಮಧ್ಯದಲ್ಲಿ ಮೊಳಗಿದ ಜಯಘೋಷಗಳು ಪರಿಸರ ಸಂರಕ್ಷಣೆಯ ಹೊಣೆಗಾರಿಕೆಗಳನ್ನು ಹೆಚ್ಚಿಸುವಲ್ಲಿ ಸಫಲವಾದವು.
ಬಂಗಾರ ಹಳ್ಳದ ಉಗಮಸ್ಥಾನವಾದ ಬಂಗಾರದ ಕೆರೆಯಲ್ಲಿ ನಿವೃತ್ತ ಮುಖ್ಯಾಧ್ಯಾಪಕ ಎಹಚ್.ಕೆ.ನಾಯ್ಕರವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರತಿಜ್ಞಾವಿಧಿ ಸ್ವೀಕರಿಸಿದ ನಂತರ ಯುವಕ-ಯುವತಿಯರು ಸ್ವಯಂಪ್ರೇರಿತರಾಗಿ ಚಾರಣದ ನೇತೃತ್ವ ವಹಿಸಿಕೊಂಡು ಕಪ್ಪತಗುಡ್ಡದ ಸಂರಕ್ಷಣೆಗಾಗಿ ಎಂಥದೆ ಸಮಸ್ಯೆಗಳು ಅಡ್ಡ ಬಂದರೂ ಅವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ, ನಿವಾರಿಸಿ ಮುನ್ನುಗ್ಗುತ್ತೇವೆ ಎಂಬ ಅಭಯ ನೀಡಿದರು.
ಚಾರಣದ ಅಂತಿಮ ಚರಣದಲ್ಲಿ ನಂದಿವೇರಿ ಬಸವಣ್ಣನ ಎದುರಿನಲ್ಲಿ ಮಾತ್ರ ದೃಗ್ಗೋಚರಿಸಿ ಮುಂದೆ ಗುಪ್ತಗಾಮಿನಿಯಾಗಿ ಹರಿವ ಬಂಗಾರ ಹಳ್ಳದ ನಂದಿ ಮುಖಿ ತೀರ್ಥ ಪ್ರೋಕ್ಷಣೆ ಸೇವನೆಯಿಂದ ಪುಳಕಿತಗೊಂಡ ಚಾರಣಿಗರು ನಂದಿವೇರಿ ಬಸವಣ್ಣನಿಗೆ ನಮಿಸಿ ಕೃತಕೃತಾರ್ಥರಾದರು.

ಪ್ರಸಾದ ಸೇವನೆ ನಂತರದ ಚಿಂತನ ಮಂಥನದಲ್ಲಿ ರಾಮದುರ್ಗದ ಪ್ರಗತಿಪರ ರೈತ ಶ್ರೀ ವಾಯ್.ಎಚ್.ಪಾಟೀಲರವರು ಮಾತನಾಡುತ್ತಾ ಪೂಜ್ಯ ಶ್ರೀ ನಂದಿವೇರಿ ಶಿವಕುಮಾರ ಮಹಾಸ್ವಾಮೀಜಿಯವರು ಕಳೆದ ಎರಡು ದಶಕಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಅವರ ಎಲ್ಲಾ ಚಟುವಟಿಕೆಗಳಲ್ಲಿ ಬೆನೆಲುಬಾಗಿ ನಿಲ್ಲುತ್ತೇನೆಂದು ಸಾರಿದರು.

ಕಳೆದ ಹತ್ತು ವರ್ಷಗಳಿಂದ ಪೂಜ್ಯರ ನೆರಳಿನಂತೆ ಹಿಂಬಾಲಿಸುತ್ತಿರುವ ಶ್ರೀ ಮಠದ ಬಹುತೇಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ರಾಮದುರ್ಗದ ಭಾಲಚಂದ್ರ ಜಾಬಶೆಟ್ಟಿಯವರು ಕಪ್ಪತಗುಡ್ಡದೊಂದಿಗೆ ಭಾವ ಬಂಧ ಬೆಸೆಯುವಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಕೈಜೋಡಿಸುತ್ತಿರುವ ಕುರಿತು ಮಾಹಿತಿ ನೀಡುವುದರೊಂದಿಗೆ ಬರುವ ದಿನಗಳಲ್ಲಿ ಕ್ರಮಿಸಬೇಕಾದಮಾರ್ಗದ ಕುರಿತು ವಿವರಣೆ ನೀಡಿದರು.

ಖ್ಯಾತ ಸಾಹಿತಿ ಬಾಳಣ್ಣ ಶೀಗಿಹಳ್ಳಿಯವರು ಮಾತನಾಡಿ ಪ್ರಾಣಿಗಳ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದದ ಕೊಡುಗೆ ಅಪಾರವಾಗಿದೆಯೆಂದರು.
ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ, ಹುಬ್ಬಳ್ಳಿ-ಧಾರವಾಡ ಪರಿಸರ ಸಂಘಟನೆಯ ಸದಸ್ಯರು, ಹುಬ್ಬಳ್ಳಿಯ ಕೋತಂಬರಿ ಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು, ಸಾಹಿತಿಗಳು, ಕವಿಗಳು ಕವಿಯಿತ್ರಿಗಳು, ವೈದ್ಯರು, ಅಭಿಯಂತರರು, ಸಾವಯವ ಕೃಷಿಕರು, ಉದ್ಯಮಿಗಳು, ಔಷಧೀಯ ಸಸ್ಯಗಳ ಬೆಳೆಗಾರರು, ಚಿಣ್ಣರು ಭಾಗವಹಿಸಿದ್ದರು.
ಬೆಳಗಾವಿ, ಕೊಪ್ಪಳ, ಹಾವೇರಿ, ವಿಜಯಪುರ, ಬಾಗಲಕೋಟೆ ಹಾಗೂ ಕಲಬುರ್ಗಿ ಜಿಲ್ಲೆಗಳಿಂದ ಜನರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";