ಬೆಳಗಾವಿ.ಯಾವುದೇ ಸಮಾಜ ಸದೃಢವಾಗಿ ನಿರ್ಮಾಣಗೊಳ್ಳಬೇಕೆಂದರೆ ಆ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಬೇಕು.ಬಸವಾದಿ ಶಿವಶರಣರು ಕಂಡ ವರ್ಣರಹಿತ, ವರ್ಗರಹಿತ, ಸಮಾನತೆಯಿಂದ ಕೂಡಿದ ಸದೃಢ ಸಮಾಜ ನಿರ್ಮಿಸಲು ಬಸವ ಅನುಯಾಯಿಗಳು ಸಂಘಟಿತರಾಗಬೇಕೆಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಕರೆ ನೀಡಿದರು. ಅವರು ಇಂದು ಶಿವಬಸವ ನಗರದ ನಾಗನೂರು ಶ್ರೀ ಪ್ರಭುದೇವ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಾ. ಶಿವಬಸವ ಮಹಾಸ್ವಾಮಿಗಳವರ 135 ನೇ ಜಯಂತಿ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಡಾ. ಶಿವಬಸವ ಮಹಾಸ್ವಾಮಿಗಳು ನಾಡಿನ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡುವುದರ ಮೂಲಕ ಕಾಯಕಯೋಗಿ, ಮಹಾಪ್ರಸಾದಿ ಎನಿಸಿದರು. ಅಂತಹ ಪೂಜ್ಯರ ಜಯಂತಿ ಮಹೋತ್ಸವವನ್ನು ಅತ್ಯಂತ ರಚನಾತ್ಮಕವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಂದು ಶ್ರೀಗಳು ತಿಳಿಸಿದರು. ಜಯಂತಿ ಮಹೋತ್ಸವದ ಅಂಗವಾಗಿ ನವಂಬರ್ 26ರಿಂದ ಡಿಸೆಂಬರ್ 26ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಶರಣರ ಅನುಭವ ಕುರಿತು ಪ್ರವಚನ ನಡೆಯಲಿದ್ದು ನಾಡಿನ ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು. ಶ್ರೀಗಳ ಜಯಂತಿ ಮಹೋತ್ಸವದ ಅಂಗವಾಗಿ ಡಿಸೆಂಬರ್ 5 ರಿಂದ ಡಿಸೆಂಬರ್ 8ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಲ್ಲಿ ಕನ್ನಡ ನುಡಿಶ್ರೀ, ಸೇವಾರತ್ನ, ಆತ್ಮಸ್ವಾಸ್ಥ್ಯ ಶ್ರೀ, ಪ್ರಸಾದಶ್ರೀ ಮುಂತಾದ ಪ್ರಶಸ್ತಿಗಳನ್ನು ನಾಡಿನ ಸಾಧಕರಿಗೆ ನೀಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಎಫ್.ವಿ. ಮಾನ್ವಿ, ಸಮಾಜ ಮುಖಂಡರಾದ ಕೆ.ಐ. ಗಾಣಿಗೇರ ಸೇರಿದಂತೆ ಮಹಾಂತೇಶ ನಗರ, ವೈಭವ ನಗರ ಹಾಗೂ ಬಸವ ಕಾಲೋನಿಯ ಭಕ್ತರು ಪಾಲ್ಗೊಂಡಿದ್ದರು.