ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್ವೊಂದರ ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅಪಾರ್ಟ್ಮೆಂಟ್ ಮಾಲೀಕರೂ ಆಗಿರುವ ಕೆಂಪೇಗೌಡ ಅವರು ನೀಡಿದ ಹೇಳಿಕೆಯಲ್ಲಿ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ.
ಹಲ್ಲೆ ಆರೋಪಕ್ಕೆ ಒಳಗಾಗಿರುವ ಮಂಜುನಾಥ್ ಗೌಡನ ತಂದೆ ಕೆಂಪೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಯುವತಿ ಹಲವು ತಿಂಗಳಿಂದ ಫ್ಲಾಟ್ನಲ್ಲಿ ವಾಸವಾಗಿದ್ದಾಳೆ. ಆಕೆ ಮನೆ ಬಾಡಿಗೆ ಕೊಡುವಾಗಲೇ ಬೇರೆ ಗಂಡಸರನ್ನು ಕರೆದುಕೊಂಡು ಬರದಂತೆ ಹೇಳಿದ್ದೆವು. ಆರಂಭದಲ್ಲಿ ಒಂದು ತಿಂಗಳು ಸುಮ್ಮನಿದ್ದಳು. ನಂತರ ಗಂಡಸರನ್ನ ಕರೆದುಕೊಂಡು ಬರೋದಕ್ಕೆ ಶುರು ಮಾಡಿದಳು ಎಂದಿದ್ದಾರೆ.
ಅಪಾರ್ಟ್ಮೆಂಟ್ ಮುಂಭಾಗಕ್ಕೆ ಬಂದು, ಸಿಗರೇಟ್ ಸೇದುತ್ತಿದ್ದಳು, ಹುಡುಗರೊಂದಿಗೆ ಸೇರಿಕೊಂಡು ಶಬ್ಧ ಮಾಡುತ್ತಿದ್ದಳು. ಸಾಕು ನಾಯಿಯನ್ನ ಮನೆಯಲ್ಲೇ ಗಲೀಜುಮಾಡಿಸುತ್ತಿದ್ದಳು. ಇದರಿಂದ ಸ್ಥಳೀಯರು ರೋಸಿಹೋಗಿದ್ದರು. ಬಂದ 6 ತಿಂಗಳಲ್ಲೇ ಇಷ್ಟೊಂದು ರಂಪಾಟ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ರಾತ್ರಿ ಆದ್ರೆ ಹುಡುಗರು ಬರ್ತಾ ಇದ್ದರು, ದಿನ ರಾತ್ರಿ ಇಬ್ಬರು, ಮೂವರು ಹುಡುಗರನ್ನ ಕರೆದುಕೊಂಡು ಬರ್ತಿದ್ಲು. ರಾತ್ರಿ ವೇಳೆ ತುಂಬಾ ಲೇಟಾಗಿ ಮನೆಗೆ ಬರ್ತಿದ್ಲು. ಸೆಕ್ಯೂರಿಟಿಗೆ ಬಾಯಿಗೆ ಬಂದ ಹಾಗೆ ಬೈದು ಗೇಟ್ ಓಪನ್ ಮಾಡಿಸ್ತಿದ್ಲು. ಹುಡುಗರ ಜೊತೆ ಮನೆಯಲ್ಲೇ ಕುಡಿದು ಗಲಾಟೆ ಮಾಡ್ತಾ ಇದ್ದಳು. ಅಕ್ಕಪಕ್ಕದ ಫ್ಲ್ಯಾಟ್ ನವರು ನಮಗೆ ಹೇಳಿದ್ರು. ಹಾಗಾಗಿ ಈ ಹಿಂದೆಯೂ ಮನೆ ಕಾಲಿ ಮಾಡುವಂತೆ ತಿಳಿಸಿದ್ವಿ. ಖಾಲಿ ಮಾಡಲ್ಲ ಅಂತ ಗಲಾಟೆ ಮಾಡಿದ್ಲು, ಹಲ್ಲೆ ಮಾಡೋಕೆ ಬರ್ತಿದ್ಲು ಎಂದು ಯುವತಿ ರಂಪಾಟಗಳನ್ನ ಬಿಚ್ಚಿಟ್ಟಿದ್ದಾರೆ.
ಡಿಸೆಂಬರ್ 3ರ ರಾತ್ರಿ ನನ್ನ ಮಗನ ಮೇಲೆ ಆಕೆಯೇ ಮೊದಲು ಹಲ್ಲೆ ಮಾಡಿದ್ದಾಳೆ. ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾಳೆ. ನಂತರ ನನ್ನ ಮಗ ಕೈಹಿಡಿದಾಗ ತರಚಿರೋ ಗಾಯ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ನಮ್ಮ ಮನೆಯ ಸಿಸಿಟಿವಿ ಕೊಟ್ಟು ಯುವತಿ ಮೇಲೆ ಕೌಂಟರ್ ಕಂಪ್ಲೆಂಟ್ ಕೊಡ್ತೀವಿ ಅಂತ ಹೇಳಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದು, ಮನೆ ಮಾಲೀಕ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆಂದು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಯುವತಿಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ ಗೌಡನನ್ನ ಬಂಧನ ಮಾಡಲಾಗಿದೆ. ಆರೋಪಿ ಯುವತಿ ಬೇರೆ ಹುಡುಗರನ್ನ ಕರೆದುಕೊಂಡು ಪಾರ್ಟಿ ಮಾಡ್ತಾ ಇದ್ದರು, ಪಾರ್ಟಿ ಮಾಡಿ ಗಲಾಟೆ ಮಾಡಿದ್ದನ್ನ ಅಕ್ಕಪಕ್ಕದ ಮನೆಯವರು ನಮಗೆ ದೂರು ಹೇಳ್ತಾ ಇದ್ದರು. ಹಾಗಾಗಿ ಹೇಳಲು ಹೋದಾಗ ನನಗೆ ತಳ್ಳಿದ್ದರಿಂದ ನಾನು ಕೇಳಗಡೆ ಬಿದ್ದೆ, ಆದಾದ ಬಳಿಕ ನಾನು ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಯ ವೇಳೆ ಆರೋಪಿ ಹೇಳಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.