ಬೆಳಗಾವಿ: ಮದುವೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಬಹುಮುಖ್ಯ ಘಟ್ಟ. ಇಲ್ಲಿ ಉತ್ತಮ ಸಂಗಾತಿ ಹುಡುಕಿಕೊಳ್ಳುವುದು ಅತಿ ಅವಶ್ಯಕ. ಗುರುಶಾಂತೇಶ್ವರ ವಧು-ವರರ ಸಮಾವೇಶ ಸಾವಿರಾರು ವಧು- ವರರಿಗೆ ಕಲ್ಯಾಣ ಕೆಲಸ ಮಾಡಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಶ್ರೀ ಗುರು ಶಾಂತೇಶ್ವರ ವದು-ವರರ ಮಾಹಿತಿ ಕೇಂದ್ರ ಹುಕ್ಕೇರಿ ವತಿಯಿಂದ ವೀರಶೈವ ಲಿಂಗಾಯತ ಹಾಗೂ ಎಲ್ಲಾ ಒಳಪಂಗಡಗಳ ವಧು ವರರ 20ನೇಯ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗುರುಶಾಂತೇಶ್ವರ ವಧು-ವರರ ಸಮಾವೇಶವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿ ಮಾಡಲಾಗಿದೆ. ವಧು-ವರರ ಬಗ್ಗೆ ಪೂರ್ಣ ಮಾಹಿಯನ್ನು ಪಡೆದುಕೊಳ್ಳುವುದು ಪೋಷಕರು ಪಡೆದುಕೊಳ್ಳಬೇಕು. ಪರಸ್ಪರ ಪೋಷಕರು ವಧು- ವರರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದರು.
ಇತ್ತೀಚೆಗೆ ಮದುವೆ ಬ್ರೋಕರ್ಗಳು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನ ಸುಲಿಗೆ ಮಾಡುತ್ತಿದ್ದಾರೆ. ಜೊತೆಗೆ ಸುಳ್ಳು ಹೇಳಿ ಸಂಬಂಧ ಕುದುರಿಸುತ್ತಾರೆ. ಇದನ್ನು ತಪ್ಪಿಸಲು ವಧು-ವರರ ಸಮಾವೇಶ ಸಹಕಾರಿಯಾಗಲಿದೆ ಎಂದರು.
ನಂತರ ಗುರುಶಾಂತೇಶ್ವರ ವಧು-ವರ ಮಾಹಿತಿ ಕೇಂದ್ರದ ಅಧ್ಯಕ್ಷ ಶಿವಾನಂದ ಜೀರಲಿ ಮಾತನಾಡಿ, ನಮ್ಮ ಸಮಾವೇಶದಿಂದ ಸಾಕಷ್ಟು ಜನ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸಮಾವೇಶ ನಡೆಸಿದ್ದೇವೆ. ಗಂಡು ಮತ್ತು ಹೆಣ್ಣು ನೋಡಿಕೊಂಡು ನಿರ್ಧಾರ ಮಾಡಬೇಡಿ. ಪರಸ್ಪರ ಭೇಟಿಯಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಮದುವೆ ಗಟ್ಟಿಗೊಳ್ಳಿಸಿಕೊಳ್ಳಿ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀಗಳ ಆಶೀರ್ವಾದದಿಂದ ಆರಂಭಿಸಿರುವ ಈ ವಧು-ವರರ ಸಮಾವೇಶವನ್ನು ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಫೋಟೋ ನೋಡಿ ಮದುವೆ ತಿರಸ್ಕಾರ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಹಿಂದಿನ ಕಾಲದಲ್ಲಿ ಮದುವೆ ಯಾಗಬೇಕೆಂದರೆ ನಮ್ಮ ಪೋಷಕರು ಗಂಡು – ಹೆಣ್ಣು ನೋಡಿ ಗಟ್ಟಿ ಮಾಡುತ್ತಿದ್ದರು.
ಮೊದಲು ಒಟ್ಟು ಕುಟುಂಬ ಇರುತ್ತಿತ್ತು. ಮನೆಯಲ್ಲಿನ ಹಿರಿಯರು ಸೂಕ್ತ ವಧು, ವರರ ಹುಡುಕಾಟಕ್ಕೆ ತೊಡಗುತ್ತಿದ್ದರು. ಆದರೆ, ಇಂದು ಸಣ್ಣ ಸಣ್ಣ ಕುಟುಂಬಗಳು ಹೆಚ್ಚಿವೆ. ಇದರಿಂದ ವಧು, ವರರ ಅನ್ವೇಷಣೆ ಕಷ್ಟವಾಗಿದೆ. ಆದ್ದರಿಂದ ಇಂಥ ಸಮಾವೇಶವನ್ನು ಮಾಡಲಾಗುತ್ತಿದೆ ಎಂದರು. ಸಮಾವೇಶದಲ್ಲಿ ನೇರ ವಧು-ವರರು ಪಾಲ್ಗೊಳ್ಳಬೇಕು ಎಂಬುದು ನಮ್ಮ ಬಯಕೆ ಎಂದರು.
ಆನಂತರ ಕೆಪಿಎಸ್ ಶಾಲೆ ಯರಗಟ್ಟಿಯ ಪ್ರಭಾರಿ ಪ್ರಾಂಶುಪಾಲ ಕಿರಣ ಚೌಗುಲಾ ಮಾತನಾಡಿ, ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಮಾಡಿರುತ್ತಾರೆ ಎನ್ನುವ ಪದ್ಧತಿ ಇದೆ. ಎಲ್ಲ ಕ್ಷೇತ್ರದಲ್ಲಿ ಈಗ ಹೆಣ್ಣು ಮಕ್ಕಳೆ ಮಂಚೂಣಿಯಲ್ಲಿದ್ದಾರೆ. ಅವರಿಗೆ ಯೋಗ್ಯ ಗಂಡು ಸಿಗುತ್ತಿಲ್ಲ. ಇಂಥ ಕೆಲಸವನ್ನು ಗುರುಶಾಂತೇಶ್ವರ ವಧು-ವರರ ಸಮಾವೇಶ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಕೌಟುಂಬಿಕ ಸಮಸ್ಯೆಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಪೋಷಕರು ತಮ್ಮ ಮಕ್ಕಳಿಗೆ ವಧು-ವರರನ್ನು ಆಯ್ಕೆ ಮಾಡುವಾಗ ಒಬ್ಬರಿಗೊಬ್ಬರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಮಹಾಂತೇಶ ದಿವಟಗಿ, ಸುವರ್ಣ ಮರಗುದ್ದಿ ಸೇರಿದಂತೆ ಗುರು ಹಿರಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.