Live Stream

[ytplayer id=’22727′]

| Latest Version 8.0.1 |

Local NewsState News

ಸಂಶೋಧನೆ ಎಂಬುದು ಅಲ್ಪವಿರಾಮ, ಅದು ನಿರಂತರವಾಗಿ ನಡೆಯುವಂಥದ್ದು; ಚಾರಿತ್ರಿಕ ಕಾದಂಬರಿಕಾರ ಯ. ರು. ಪಾಟೀಲ

ಸಂಶೋಧನೆ ಎಂಬುದು ಅಲ್ಪವಿರಾಮ, ಅದು ನಿರಂತರವಾಗಿ ನಡೆಯುವಂಥದ್ದು; ಚಾರಿತ್ರಿಕ ಕಾದಂಬರಿಕಾರ ಯ. ರು. ಪಾಟೀಲ

ಸಂಶೋಧನೆ ಎಂಬುದು ಅಲ್ಪವಿರಾಮ, ಅದು ನಿರಂತರವಾಗಿ ನಡೆಯುವಂಥದ್ದು. ಲೇಖಕ, ವಿಶೇಷವಾಗಿ ಚಾರಿತ್ರಿಕ ಕಾದಂಬರಿಕಾರ ತಾನು ಕಂಡುಕೊಂಡ ಸಂಶೋಧಿಸಿದ ಸಂಗತಿಗಳನ್ನಾಧರಿಸಿ ಕೃತಿ ರಚಿಸುತ್ತಾನೆ. ಇಂಥ ಅಧ್ಯಯನದಿಂದ ಸತ್ಯಗಳು ಹೊರಬಂದಾಗ ‘ಮಾಗಧ’ದಂತಹ ಕಾದಂಬರಿ ನಿರ್ಮಾಣವಾಗುತ್ತದೆಂದು ಚಾರಿತ್ರಿಕ ಕಾದಂಬರಿಕಾರ ಯ. ರು. ಪಾಟೀಲರು ಹೇಳಿದರು. ಅವರು ಉತ್ತರ ಕರ್ನಾಟಕ ಲೇಖಕಿಯರ ಸಂಘದಲ್ಲಿ ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ಅವರ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಚಾರಿತ್ರಿಕ ಕಾದಂಬರಿ ಕ್ಷೇತ್ರಕಾರ್ಯ , ವಿಷಯ ಸಂಗ್ರಹಣೆ , ವಿಶ್ಲೇಷಣೆಗಳ ನಂತರ ರೂಪಗೊಳ್ಳುವುದರಿಂದ ಆ ಕೃತಿ ಗಟ್ಟಿಕೃತಿಯಾಗಿರುತ್ತದೆ ಎಂದರು. ಇಂಥವು ಮಾತ್ರ ಕಾಲದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುತ್ತವೆ ಎಂದು ಹೇಳಿದರು.

ಇದಕ್ಕೂ ಮೊದಲು ಕಾದಂಬರಿಕಾರ್ತಿ ಸಹನಾರವರು ೮೦೦ ಪುಟಗಳ ಈ ಕೃತಿಗೆ ಪ್ರೇರಣೆ ನೀಡಿದ ವಿಷಯಗಳನ್ನು ಪ್ರಸ್ತಾಪಿಸುತ್ತಾ ಮನೆಯ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಪರಿಸರದ ಜೊತೆಗೆ ಅಸೇತು ಹಿಮಾಚಲ ಹರಡಿಕೊಂಡಿರುವ ಭಾರತೀಯ ಸಂಸ್ಕೃತಿಯ ಪ್ರಭೆ, ಅದನ್ನು ಬೆಳಗಿದ ಮಹನೀಯರ ಹಾಗೂ ಈ ನೆಲದ ಕುರಿತಾದ ಆಸಕ್ತಿ ಈ ಅಧ್ಯಯನಕ್ಕೆ , ಈ ಕೃತಿಗೆ ಕಾರಣವಾಯಿತೆಂದು ತಿಳಿಸಿದರು. ಭಾರತೀಯರು ಭಾವುಕರು. ತಮ್ಮ ಅಂತ:ಸತ್ವವನ್ನು ಬಿಟ್ಟುಕೊಡದೇ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಾದ ಎಚ್ಚರಿಕೆಯ ಮಾತನ್ನೂ ಅವರು ಹೇಳಿದರು.
ಕಾದಂಬರಿಯಲ್ಲಿ ಎಲ್ಲಿಯೂ ವಿವರಣೆಗಳೇ ಇಲ್ಲ. ಸಂಭಾಷಣೆಗಳೇ ಎಲ್ಲ ವಿಷಯಗಳನ್ನು ಬಿತ್ತರಿಸುತ್ತಾ ಪಾತ್ರಗಳನ್ನು ಕಟ್ಟಿಕೊಡುವ ಸಹನಾರವರ ಬರವಣಿಗೆಯ ರೀತಿ ಅನನ್ಯವಾದುದೆಂದು ಮಾಗಧ ವಿನ್ಯಾಸ ಮತ್ತು ಶೈಲಿಯ ಬಗ್ಗೆ ಮಾತನಾಡುತ್ತಾ ಲೇಖಕಿ ರೂಪಾ ಜೋಷಿ ಹೇಳಿದರು.

ಸುಲಭವಾಗಿ ಓದಿಸಿಕೊಂಡು ಹೋಗುವ ಲಾಲಿತ್ಯದ ಶೈಲಿ ಇಲ್ಲಿಲ್ಲ. ಧ್ಯಾನಸ್ಥ ಸ್ಥಿತಿಯಲ್ಲಿ ಓದುವ ಓದುಗನಿಗೆ ಮಾತ್ರ ಇದು ನಿಲುಕುವಂಥದ್ದೆಂಬ ಮಾತನ್ನು ಅವರು ಹೇಳಿದರು. ನಂತರದಲ್ಲಿ ಕಾದಂಬರಿಯ ಭಾಷೆ ಹಾಗೂ ಎರಡನೂರಕ್ಕೂ ಮಿಕ್ಕಿರುವ ಪಾತ್ರಗಳ ಕುರಿತಾಗಿ ಸರಸ್ವತಿ ಭೋಸ್ಲೆ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಲೇಖಕಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಹೋಗಿ ನಡೆಸಿದ ಸಂಶೋಧನೆ ಹಾಗೂ ಸತತ ನಾಲ್ಕು ವರ್ಷಗಳ ಅಧ್ಯಯನದ ಫಲವಾಗಿ ಮೂಡಿಬಂದ ಈ ಕೃತಿ ನಿಶ್ಚಿತವಾಗಿ ಸಾಹಿತ್ಯ ಇತಿಹಾಸದಲ್ಲಿ ಸ್ಥಾನ ಪಡೆಯುತ್ತದೆಂದು ಹೇಳಿದರು.

ದತ್ತಿದಾನಿಗಳಾದ ಡಾ. ಎಸ್. ಎಂ. ಶಿವಪ್ರಸಾದರವರು ತಾಯಿಯ ಸ್ಮರಣೆಯಲ್ಲಿಟ್ಟ ದತ್ತಿ ಅರ್ಥಪೂರ್ಣವಾಗಿ ನಡೆದುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆಯರು ಸಕ್ರಿಯವಾಗಿ ಪಾಲ್ಗೊಂಡರು. ಒಟ್ಟು ಕಾರ್ಯಕ್ರಮವನ್ನು ಮೇಘಾ ಹುಕ್ಕೇರಿ ನಿರೂಪಿಸಿದರು.ಡಾ. ಉಷಾ ಗದ್ದಗಿಮಠ ಸ್ವಾಗತಿಸಿದರು. ಡಾ. ವಿ. ಶಾರದಾ ವಂದಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";