ಹುಕ್ಕೇರಿ: ಪರೀಕ್ಷೆ ಬರೆದು ಮನೆಗೆ ಮರಳಲು ಟ್ರ್ಯಾಕ್ಟರ್ ಏರುತ್ತಿದ್ದ ವಿದ್ಯಾರ್ಥಿನಿಯೋರ್ವಳು ಆಯತಪ್ಪಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ರಾಷ್ಟ್ರೀಯ ದಾದಬಾನಹಟ್ಟಿ ಹೆದ್ದಾರಿ-4ರ ಸರ್ಕಲ್ ಸೋಮವಾರ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಶೃತಿಕಾ ಈರಪ್ಪ ರುದ್ರಾಪುರಿ (17) ಮೃತ ವಿದ್ಯಾರ್ಥಿನಿ. ಶಿವಾಪುರದಿಂದ ಯಮಕನಮರಡಿ ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ್ದ ಶೃತಿಕಾ ಪರೀಕ್ಷೆ ಮುಗಿದ ನಂತರ ದಾದಬಾನಹಟ್ಟಿ ಸರ್ಕಲ್ ಬಳಿ ತಮ್ಮೂರಿಗೆ ಮರಳಲು ಇತರ ವಿದ್ಯಾರ್ಥಿನಿಯರೊಂದಿಗೆ ಕಾಯುತ್ತ ನಿಂತಿದ್ದರು. ಅದೇ ವೇಳೆ ಹತ್ತರಗಿ ಕಡೆಯಿಂದ ಶಿವಾಪುರ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್ ಆಗಮಿಸಿದ್ದು, ಟ್ಯಾಕ್ಟರ್ನಲ್ಲಿ ಮೊದಲು ಓರ್ವ ವಿದ್ಯಾರ್ಥಿನಿ ಹತ್ತಿದ ಬಳಿಕ ಶೃತಿಕಾ ಟ್ರ್ಯಾಕ್ಟರ್ ಏರಲು ಹೋದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಅಷ್ಟರಲ್ಲಿ ಚಾಲಕ ಟ್ರ್ಯಾಕ್ಟರ್ ಮುಂದೆ ಚಲಾಯಿಸಿದ್ದರಿಂದ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಮಕನಮರಡಿಯಿಂದ ಶಿವಾಪುರ ಗ್ರಾಮಕ್ಕೆ ಬೆಳಗ್ಗೆ ಹಾಗೂ ಸಂಜೆ ಮಾತ್ರ ಬಸ್ ವ್ಯವಸ್ಥೆ ಇದೆ. ಮಧ್ಯಾಹ್ನ ವೇಳೆ ಶಿವಾಪುರಕ್ಕೆ ಬಸ್ ವ್ಯವಸ್ಥೆ ಇಲ್ಲದ್ದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅನಿವಾರ್ಯವಾಗಿ ಆಶ್ರಯಿಸುವಂತಾಗಿದೆ. ಇಂಥ ಅವ್ಯವಸ್ಥೆಯಿಂದಲೇ ವಿದ್ಯಾರ್ಥಿನಿ ಶೃತಿಕಾ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ವರದಿ : ಕಲ್ಲಪ್ಪ ಪಾಮನಾಯಿಕ
ಹುಕ್ಕೇರಿ