ಮಧ್ಯಪ್ರದೇಶ: ಹೆಂಡತಿ ಹಾಗೂ ಆಕೆಯ ಸಂಬಂಧಿಕರಿಂದ ಕಿರುಕುಳ ಅನುಭವಿಸಿದ್ದಾಗಿ ಆರೋಪಿಸಿರುವ 28 ವರ್ಷದ ವ್ಯಕ್ತಿಯೊಬ್ಬರು, ಯಾರೂ ಮದುವೆಯಾಗಬೇಡಿ ಎಂದು ಯುವಕರಿಗೆ ಕರೆ ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನಿತಿನ್ ಪಡಿಯಾರ್ ಬರೆದಿರುವ ಮರಣ ಪತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ನಿಯು ದೇಶದ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾಳೆ ಎಂದು ಅದರಲ್ಲಿ ಆರೋಪಿಸಲಾಗಿದೆ.
ಯಾರ ಹೆಸರನ್ನೂ ಉಲ್ಲೇಖಿಸದೆ, ಕೇಂದ್ರ ಸರ್ಕಾರವು ಕಾನೂನುಗಳಿಗೆ ಬದಲಾವಣೆ ತರಬೇಕು ಎಂದು ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ತಮ್ಮ ಪತ್ನಿಯ ವಿರುದ್ಧ ಇದೇ ರೀತಿ ಆರೋಪ ಮಾಡಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅದರ ಬೆನ್ನಲ್ಲೇ, ಇಂದೋರ್ ಪ್ರಕರಣ ವರದಿಯಾಗಿದೆ. ‘ಪಡಿಯಾರ್ ಅವರು, ಬಂಗಾಂಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡಿದ್ದಾರೆ’ ಎಂದು ಡಿಸಿಪಿ ರಾಮ್ನೇಹಿ ಮಿಶ್ರಾ ತಿಳಿಸಿದ್ದಾರೆ. ‘ಪಡಿಯಾರ್ ತಮ್ಮ ಪತ್ನಿ, ಅತ್ತೆ ಹಾಗೂ ಇತರರ ಹೆಸರುಗಳನ್ನು ಉಲ್ಲೇಖಿಸಿ ದೌರ್ಜನ್ಯದ ಆರೋಪ ಮಾಡಿದ್ದಾರೆ. ಆರೋಪಗಳ ಕುರಿತು ತನಿಖೆ ನಡೆಸಲಾಗುವುದು. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ ಬಳಿಕ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿದ್ದಾರೆ.
ಮೃತ ವ್ಯಕ್ತಿಯು ತಮ್ಮ ಪತ್ರದಲ್ಲಿ, ‘ನಾನು ನಿತಿನ್ ಪಡಿಯಾರ್, ಮಹಿಳೆಯರು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ, ಅವುಗಳಿಗೆ ಬದಲಾವಣೆ ತರಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ವೇಳೆ ಈ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ಆಗದಿದ್ದರೆ, ಸಾಕಷ್ಟು ಪುರುಷರು ಮತ್ತು ಅವರ ಕುಟುಂಬಗಳು ಪ್ರತಿನಿದಿನವೂ ನಾಶವಾಗಲಿವೆ’ ಎಂದಿದ್ದಾರೆ.
ಮುಂದುವರಿದು, ‘ಮದುವೆ ಮಾಡಿಕೊಳ್ಳದಂತೆ ಭಾರತದ ಎಲ್ಲ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದುವೇಳೆ ಮದುವೆಯಾಗುವುದಾದರೆ, ಮೊದಲೇ ಕರಾರು ಮಾಡಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ‘ನಿಮ್ಮಲ್ಲಿ ಯಾರಿಗಾದರೂ ತಮಗೂ ಅನ್ಯಾಯವಾಗಿರುವುದು ಅರಿವಾದರೆ, ನನ್ನ ಸಾವಿಗೆ ನ್ಯಾಯ ಕೇಳಿ. ಇಲ್ಲವೇ, ‘ನಿಮ್ಮ ಸರದಿ ಬರುವವರೆಗೆ ಕಾಯಿರಿ’ ಎಂದು ಬರೆದಿದ್ದಾರೆ.