ಧಾರವಾಡ: ನಗರದಲ್ಲಿ ಜೈಲಿಗೆ ಕರೆದೊಯ್ಯವಾಗ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. ಆದರೆ, ಪೊಲೀಸರು ಚಾಣಾಕ್ಷತೆಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧನ ವಾರಂಟ್ ಜಾರಿಯಾಗಿದ್ದರಿಂದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದೊಯ್ಯುತ್ತಿದ್ದ ವೇಳೆ, ಪೊಲೀಸರಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಕಟ್ಟಡವೇರಿದ ಆರೋಪಿ, ನ್ಯಾಯಾಧೀಶರನ್ನು ಸ್ಥಳಕ್ಕೆ ಕರೆಸಬೇಕು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆದ್ದರಿಂದ ಸ್ಥಳದಲ್ಲೇ ಇದ್ದ ಉಪನ್ಯಾಸಕನನ್ನೇ ಜಡ್ಜ್ ಎಂದು ಬಿಂಬಿಸಿದ್ದು, ಜಡ್ಜ್ ಮಾತನಾಡುತ್ತಿದ್ದಾಗ ಉಪಾಯದಿಂದ ಆರೋಪಿಯನ್ನು ಮತೊಮ್ಮೆ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2021ರಲ್ಲಿ, ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆರೋಪಿ ವಿಜಯ ಉಣಕಲ್‌ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಆರೋಪಿ ವಿಜಯ್ ಉಣಕಲ್‌ನನ್ನು ಪೊಲೀಸರು ಜೈಲಿಗೆ ಕರೆದೊಯೊತ್ತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿ, ಆರೋಪಿಯನ್ನು ಯಾಮಾರಿಸಿ ಬಂಧನ ಮಾಡಿದ್ದಾರೆ.
ಇದೆ ವೇಳೆ ಆರೋಪಿಯ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ವಿಶ್ವನಾಥ್ ಚಿಂತಾಮಣಿ ಆಗಮಿಸಿದ್ದರು. ಈ ಸಂಧರ್ಭವನ್ನು ಬಳಸಿಕೊಂಡ ಪೊಲೀಸರು, ಪ್ಲಾನ್ ಮಾಡಿ ಇವರೇ ಜಡ್ಜ್ ಎಂದು ಉಪನ್ಯಾಸಕರನ್ನು ತೋರಿಸಿ ನಂಬಿಸಿದ್ದಾರೆ. ಪೊಲೀಸರ ಪ್ಲಾನ್‌ನಂತೆ ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರು ಕೂಡ ನಟಿಸಿದ್ದಾರೆ. ಅದನ್ನು ನಂಬಿದ, ಆರೋಪಿ ಉಪನ್ಯಾಸಕನ ಜತೆ ಮಾತನಾಡುತ್ತಿದ್ದಾಗ, ಆತನನ್ನು ಕಟ್ಟಡದಿಂದ ಕೆಳಗೆ ಇಳಿಸಿ, ಬಂಧಿಸಲಾಗಿದೆ. ನಂತರ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.