ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ದಿ. ೨೦-೦೨-೨೦೨೫ ರಂದು ಕನ್ನಡ ಭವನದಲ್ಲಿ ನಡೆದ “ಶತಮಾನ ಕಂಡ ಸಾಹಿತಿಗಳು” ಎಂಬ ತಿಂಗಳ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ, ಪ್ರೊ. ಶ್ರೀಕಾಂತ ಶಾನವಾಡ ಅವರು ಮಾತನಾಡುತ್ತಾ, ಕರ್ನಾಟಕದವರೇ ಆದ ಅಪ್ಪಟ ಗಾಂಧೀವಾದಿ ದಿ.ಹರ್ಡೇಕರ್ ಮಂಜಪ್ಪನವರು ೧೮-೨-೧೮೮೬ ರಂದು ಉತ್ತರಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಜನಿಸಿದರು. ಹರ್ಡೇಕರ್ ಮಂಜಮ್ಮನರ ಪುತ್ರರಾದ ಇವರು ತಾಯಿಯ ವಾತ್ಸಲ್ಯವನ್ನು ಅಪಾರವಾಗಿ ಅನುಭವಿಸಿದವರು. ನಾಡು ನುಡಿಯ ಸೇವೆಯ ಜೊತೆಯಲ್ಲಿ ದೇಶ ಸೇವೆಗೂ ಕೂಡ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಬ್ರಹ್ಮಚಾರಿಯಾಗಿ ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಗಂಧದ ಕೊರಡಿನಂತೆ ತೇಯ್ದವರು.ಶಿಕ್ಷಕರಾಗಿ ಸೇವೆ ಆರಂಭಿಸಿದರು, ಆದರೆ ಸರಕಾರಿ ಸೇವೆಯನ್ನು ತ್ಯಜಿಸಿ ದೇಶ ಸೇವೆಗಾಗಿ ಹೋರಾಟವನ್ನು ಆರಂಭಿಸಿದ ಕೀರ್ತಿ ಇವರದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಮಹಾತ್ಮ ಗಾಂಧೀಜಿ ಯವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ಕನ್ನಡಿಗರಲ್ಲಿ ಚಳುವಳಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಸುಮಾರು ೮೩ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಉತ್ತಮ ಸಾಹಿತಿಯೂ ಕೂಡಾ ಆಗಿದ್ದರು.ಮೇರು ವ್ಯಕ್ತಿತ್ವವನ್ನು ಹೊಂದಿದ ಇಂತಹ ಮಹನೀಯರು ಕರ್ನಾಟಕದವರು ಎನ್ನುವುದು ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಡುವ ವಿಷಯ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಜಿ. ಸಿದ್ನಾಳ ಅವರು ಮಾತನಾಡಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ತುಂಬಾ ಸೂಕ್ತವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಇವರು ಮಾತನಾಡುತ್ತಾ, ನಾಡಿನ ಇತಿಹಾಸಕಾರರಿಂದ ನಾಡು ನುಡಿಗಾಗಿ ಅಪಾರವಾದ ಕೊಡುಗೆಯನ್ನು ನೀಡಿರುವ ಮಹನೀಯರನ್ನು ಕನ್ನಡಿಗರಾದ ನಾವೆಲ್ಲ ಸ್ಮರಣೆ ಮಾಡುವುದು ಔಚಿತ್ಯಪೂರ್ಣ ಎಂದರು.
ಸುಮಾ ಬೇವಿನಕೊಪ್ಪಮಠ ಮತ್ತು ಭಾರತಿ ಗೋಮಾಡಿ ಇವರು ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಸಹ ಕಾರ್ಯದರ್ಶಿ ವೀರಭದ್ರ ಮ.ಅಂಗಡಿಯವರು ಕಾರ್ಯಕ್ರಮವನ್ನು ನಿರೂಪಿಸಿ ಅತಿಥಿ ಗಣ್ಯಮಾನ್ಯರನ್ನು ಸ್ವಾಗತಿಸಿದರು. ಗೌ ಕಾರ್ಯದರ್ಶಿ ಎಂ ವಾಯ್.ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ ಬಿ.ಬನಶಂಕರಿ ಅತಿಥಿಗಳನ್ನು ಪರಿಚಯಿಸಿದರು.ಸುಧಾ ಪಾಟೀಲ ಅವರು ವಂದನಾರ್ಪಣೆ ಸಲ್ಲಿಸಿದರು.
ಹಿರಿಯ ಸಾಹಿತಿಗಳಾದ ಸ. ರಾ. ಸುಳುಕುಡೆ, ಅಶೋಕ ಉಳ್ಳೆಗಡ್ಡಿ, ಡಾ.ಬಿ ವಾಯ್.ನಾಯಿಕ, ಮಹಾದೇವ ಗೊಂದಿ, ಮರಲಕ್ಕನವರ್, ಬೆಳಗಾವಿ ತಾಲೂಕಾ ಕ ಸಾ ಪ ಅಧ್ಯಕ್ಷ ಸುರೇಶ ಹಂಜಿ , ಬ ಹೊ.ಶಿಗಿಹಳ್ಳಿ, ಬಸವರಾಜ ಪಾಟೀಲ, ವಿ ಎಸ್ ಕುಂದ್ರಾಳ, ಸರೋಜಿನಿ ಸಜ್ಜನ, ಶಂಕರ ಶೆಟ್ಟರ ಮುಂತಾದ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.