ಹುಕ್ಕೇರಿ: ನೆರೆಯ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹೆಚ್ಚಿದ ಹಿನ್ನಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನೆರೆ ರಾಜ್ಯಗಳಿಂದ ರಾಜ್ಯದ ಗಡಿ ಪ್ರದೇಶಗಳಲ್ಲಿ ಕೋಳಿ ಉತ್ಪನ್ನಗಳ ಸಾಗಾಣಿಕೆಗೆ ರಾಜ್ಯ ಸರ್ಕಾರ ನಿಷೇಧ ಹೇರಲಾಗಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಗ್ರಾಮದ ವರವಲಯ ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ 4ರ್ ಹತ್ತಿರ ಮಹಾರಾಷ್ಟ್ರದ ಗಡಹಿಂಗ್ಲಜ್ ಹೋಗುವ ರಸ್ತೆಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ತಡೆಯಲು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಆದರೆ ಈ ಚೆಕ್ ಪೋಸ್ಟ್ ಹೆಸರಿಗೆ ಮಾತ್ರವಾಗಿದೆ. ಹುಕ್ಕೇರಿ ತಾಲೂಕಿನಿಂದ ಮಹಾರಾಷ್ಟ್ರಕ್ಕೆ ಸಂಪರ್ಕಿಸಲು ನಾನಾ ರಸ್ತೆಗಳಿವೆ. ಆದರೆ ಉಳಿದ ಯಾವೊಂದು ರಸ್ತೆಯಲ್ಲಿಯೂ ಚೆಕ್ ಪೋಸ್ಟ್ ನಿರ್ಮಿಸಿಲ್ಲ.
ಸಂಕೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಕೇವಲ ಬ್ಯಾನರ್ ಗೆ ಮಾತ್ರ ಸಿಮೀತವಾಗಿದೆ. ನೆರೆ ರಾಜ್ಯದಿಂದ ಕೋಳಿಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ತಡೆದು ಪರಿಶೀಲಿಸಲು ಚೆಕ್ ಪೋಸ್ಟ್ ನಲ್ಲಿ ಯಾವುದೇ ಅಧಿಕಾರಿಗಳಿಲ್ಲದಿರುವುದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಪ್ರತಿದಿನ ಬೆಳಗ್ಗೆ ಮಾತ್ರ ಅಧಿಕಾರಿಗಳು ಆಗಮಿಸಿ, ಪೋಟೊಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಧಿಕಾರಿಗಳು ಪೋಟೊ ತೆಗೆದುಕೊಳ್ಳುವ ಉದ್ದೇಶದ ಕುರಿತು ಸ್ಥಳೀಯರಿಗೆ ಮಾಹಿತಿಯಿಲ್ಲ. ಅಧಿಕಾರಿಗಳ ನಿರ್ಗಮನದ ಬಳಿಕ ಚೆಕ್ ಪೋಸ್ಟ್ ನಲ್ಲಿನ ಬ್ಯಾನರ್ ಬಿಟ್ಟರೇ ಸಂಬಂಧಿಸಿದ ಯಾರೊಬ್ಬರು ಇಲ್ಲದಿರುವುದು ಜಿಲ್ಲೆಯಲ್ಲಿ ಹಕ್ಕಿ ಜ್ವರ ವ್ಯಾಪಿಸಬಹುದು ಎಂಬುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಅದೇನೆ ಇರಲಿ ಚೆಕ್ ಪೋಸ್ಟ್ ನಿರ್ಮಿಸಿರುವ ಉದ್ದೇಶಕ್ಕೆ ಅನುಗುಣವಾಗಿ ಸರಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸಿದರೇ ಜಿಲ್ಲೆಯಲ್ಲಿ ಹಕ್ಕಿಜ್ವರದ ಆತಂಕ ಪಡಬೇಕಾಗಿಲ್ಲ. ಇನ್ನಾದರೂ ಅಧಿಕಾರಿಗಳು ಕಾರ್ಯ ನಿರ್ವಹಿಸುವರೇ ಎಂಬುವುದನ್ನು ಕಾದು ನೋಡಬೇಕಾಗಿದೆ.
ಕೋಟ್
ಇಂದು ಚೆಕ್ ಪೋಸ್ಟ್ ನಲ್ಲಿನ ಕಾರ್ಯ ನಿರ್ವಹಿಸುವ ಅಧಿಕಾರಿ ಯಾರೆಂದು ಮಾಹಿತಿಯಿಲ್ಲ. ಚೆಕ್ ಪೋಸ್ಟ್ ನಲ್ಲಿ ನಮ್ಮ ಸಿಬ್ಬಂದಿ ಇದ್ದರೂ, ಕೋಳಿ ಸಾಗಾಣಿಕೆಯ ವಾಹನಗಳ ಚಾಲಕರು ವಾಹನ ನಿಲ್ಲಿಸುತ್ತಿಲ್ಲ. ಅದಕ್ಕಾಗಿ ಸಂಕೇಶ್ವರ ಪೊಲೀಸ ಠಾಣೆಗೆ ಒರ್ವ ಸಿಬ್ಬಂದಿ ನೀಡುವಂತೆ ತಿಂಗಳ ಮುಂಚೆಯೇ ಮನವಿ ಸಲ್ಲಿಸಿದ್ದೇವೆ. ಮುಂದೆ ಈ ರೀತಿಯಾಗದಂತೆ ನಿಗಾವಹಿಸಲಾಗುವುದು.
ಡಾ.ರಮೇಶ ಕದಂ, ಹುಕ್ಕೇರಿ ತಾಲೂಕ ಪಶು ವೈದ್ಯಾಧಿಕಾರಿ.
ವರದಿ: ಕಲ್ಲಪ್ಪ ಪಾಮನಾಯಿಕ್