Live Stream

[ytplayer id=’22727′]

| Latest Version 8.0.1 |

National NewsState News

ಜನ್ಮದಿನದ ಸ್ಮರಣೆ: ಬಹುಮುಖ ಪ್ರತಿಭೆಯ ನಟ ಉದಯಕುಮಾರ

ಜನ್ಮದಿನದ ಸ್ಮರಣೆ: ಬಹುಮುಖ ಪ್ರತಿಭೆಯ ನಟ ಉದಯಕುಮಾರ

‌ ಕನ್ನಡದಲ್ಲಿ ಉದಯಕುಮಾರ ಅವರಿಗಿಂತ ಹೆಚ್ಚು ಪ್ರಚಾರ ಪ್ರಸಿದ್ಧಿ ಗಳಿಸಿದ ಬೇರೆ‌ನಾಯಕ ನಟರಿರಬಹುದು, ಆದರೆ ಅವರಿಗೆ ಸರಿ ಸಮನಾದ ಪ್ರತಿಭಾವಂತರು ಬೇರೆ ಇಲ್ಲ. ಅವರ ಬಗ್ಗೆ ಸರಿಯಾಗಿ ಅರಿತವರಿಗೆಲ್ಲ ಅದು ಗೊತ್ತು. ಉದಯಕುಮಾರರಲ್ಲಿ ಹಲವು ಬಗೆಯ ಪ್ರತಿಭೆ, ಸಾಮರ್ಥ್ಯಗಳು ಮೇಳವಿಸಿದ್ದವು.

‌‌ ‌                               ನನಗೆ ಅವರ ಪರಿಚಯವಾದದ್ದು ೬೦ ರ ದಶಕದಲ್ಲಿ . ಅವರು ಆಗಾಗ ಹೊನ್ನಾವರಕ್ಕೆ ನಾಟಕಗಳಲ್ಲಿ ಪಾತ್ರ ವಹಿಸಲು ವಿಶೇಷಾಮಂತ್ರಿತರಾಗಿ ಬರುತ್ತಿದ್ದರು. ಬಂದಾಗೆಲ್ಲ ಅಲ್ಲಿಯ ರಾಮತೀರ್ಥಕ್ಕೂ ಹೋಗಿ ತೀರ್ಥದಲ್ಲಿ ಸ್ನಾನ ಮಾಡಿ ಮಡಿಯುಟ್ಟು ಶಿವಮಂತ್ರ ಹೇಳುತ್ತ ಕೆಳಗಿನಿಂದ ನೀರಿನ ಕೊಡ ಹೊತ್ತು ನೂರು ಮೆಟ್ಟಿಲು ಏರಿ ರಾಮೇಶ್ವರನಿಗೆ ಅಭಿಷೇಕ ಮಾಡುತ್ತಿದ್ದರು. ರಾಮತೀರ್ಥ ಅವರಿಗೆ ಬಹಳ ಪ್ರಿಯವಾದ ಸ್ಥಳವಾಗಿತ್ತು. ನಾನು ಬೆಂಗಳೂರಿನ ಜಯನಗರದಲ್ಲಿದ್ದ ಅವರ ಮನೆಗೂ ಅನೇಕ ಸಲ ಹೋಗಿದ್ದೇನೆ. ಒಮ್ಮೆ ಹಾಗೆ ಹೋದಾಗ ಅವರ ಕಾರಿನಲ್ಲೇ ಸಿದ್ಧಗಂಗಾ ಕ್ಷೇತ್ರಕ್ಕೂ ಹೋಗಿಬಂದಿದ್ದೇನೆ. ಅಲ್ಲಿಯ ಜಾತ್ರೆಯ ಸಮಯದಲ್ಲಿ ಅವರ ಭಾಷಣ ಮತ್ತು ಸನ್ಮಾನ ಇತ್ತು. ನನ್ನನ್ನೂ ಕರೆದುಕೊಂಡುಹೋಗಿದ್ದರು. ತಾವು ಬರೆದ ಕೌರವನ ಕೊನೆಯ ದಿನಗಳ ಕುರಿತಾದ ಒಂದು ನಾಟಕವನ್ನೂ ನನಗೆ ಓದಲು ಕೊಟ್ಟಿದ್ದರು. ಉತ್ತಮ ವಾಗ್ಮಿ ಹಾಗೂ ಬರೆಹಗಾರರೂ ಆಗಿದ್ದ ಅವರ ಮೂಲ ಹೆಸರು ಸೂರ್ಯನಾರಾಯಣಮೂರ್ತಿ.

                                  ೧೯೩೩ ಮಾರ್ಚ ೫ ರಂದು‌ ಜನಿಸಿದ ಅವರು ಹದಿಹರೆಯದಲ್ಲೇ ಯುವಕರನ್ನು ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಚಿತ್ರನಟರಲ್ಲಿ ಹಾಗೆ ಹೋರಾಟ ಮಾಡಿದ ಏಕೈಕ‌ ವ್ಯಕ್ತಿ ಅವರು. ಮೂಲತಃ ರಂಗನಟರಾಗಿ ಪಳಗಿದ ಅವರು ತಮ್ಮದೇ ಉದಯ ಕಲಾನಿಕೇತನ ಸ್ಥಾಪಿಸಿದ್ದಲ್ಲದೇ ರಂಗ ಮತ್ತು ಸಿನೆಮಾ ಅಭಿನಯ ತರಬೇತಿ ನೀಡುತ್ತಿದ್ದರು. ಸಾಮಾಜಿಕ ಕಾಳಜಿಯುಳ್ಳ ಅವರು ಬಡ ಕಲಾವಿದರಿಗೆ ನೆರವಾಗಲು ನಾಟಕ ಪ್ರದರ್ಶನಗಳನ್ನೇರ್ಪಡಿಸುತ್ತಿದ್ದರು. ಅಷ್ಟೇ ಅಲ್ಲ, ಅನಕೃ , ರಾಮಮೂರ್ತಿ, ತರಾಸು ಮೊದಲಾದವರೊಡನೆ ಸಂಪರ್ಕ ಹೊಂದಿದ್ದ ಅವರು ಕನ್ನಡಪರ ಹೋರಾಟಗಳಲ್ಲಿಯೂ ಭಾಗವಹಿಸಿದ್ದರು.

                                ೧೯೫೬ ರಲ್ಲಿ ಭಾಗ್ಯೋದಯ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದ ಅವರು ಚಂದವಳ್ಳಿಯ ತೋಟ, ರತ್ನಗಿರಿ ರಹಸ್ಯ , ಕನಕದಾಸ ಮೊದಲಾದ ೧೭೧ ಕನ್ನಡ ಸಿನಿಮಾಗಳಲ್ಲಿ, ೧೫ ತೆಲುಗು, ೬ ತಮಿಳು, ೧ ಹಿಂದಿ ಸಿನಿಮಾ ಸಹಿತ ಒಟ್ಟು ೧೯೩ ಸಿನಿಮಾಗಳಲ್ಲಿ ಅಭಿನಯಿಸಿ, ಕಲಾಕೇಸರಿ, ನಟಸಾಮ್ರಾಟ , ಗಂಡುಗಲಿ, ಪವನಸುತ ಮೊದಲಾದ ಬಿರುದುಗಳಿಗೆ ಪಾತ್ರರಾದರು. ಕನ್ನಡಿಗರ ನೆಚ್ಚಿನ ನಟರೆನಿಸಿದರು. ಉದಯಕುಮಾರರು ಸಿನೆಮಾಗಳಲ್ಲಿ ಖಳನಟರಾಗಿ ದುಷ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ಅವರು ಅದಕ್ಕೆ ತದ್ವಿರುದ್ಧವಾಗಿದ್ದರು. ಧಾರ್ಮಿಕ ಆಧ್ಯಾತ್ಮಿಕ ಒಲವಿನವರಾಗಿದ್ದ ಅವರು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮಿಂದು ಒಂದು ತಾಸು ಪೂಜೆ ಮಾಡಿ ಆರತಿ ಪ್ರಸಾದದ ನಂತರವೇ ಚಹ ಕುಡಿದು‌ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದುದನ್ನು ನಾನು ಅವರ ಮನೆಯಲ್ಲಿದ್ದಾಗ‌ ಕಂಡಿದ್ದೇನೆ.

                              ಸುಸಂಸ್ಕೃತ ವ್ಯಕ್ತಿತ್ವದ ಉದಾರ ಹೃದಯದ ಕಲಾವಿದರು. ಈಗಲೂ‌ಅವರ ಒಡನಾಟದ ನೆನಪು ಆಗುತ್ತಿರುತ್ತದೆ. ೧೯೮೫ ಡಿಸೆಂಬರ್ ೨೬ ರಂದು ಅವರು ಕಣ್ಮರೆಯಾದರು. ಅವರ ಪತ್ನಿ ಕಮಲಮ್ಮನವರು. ಮಗಳು ರೇಣುಕಾ ಬಾಲಿ ಅವರೂ ಕಲಾವಿದೆಯಾಗಿದ್ದರು. ಇಂದಿಗೂ  ಮರೆಯಲಾಗದ ಮಹಾ ನಟ ಅವರು.

‌‌‌ – ಎಲ್. ಎಸ್. ಶಾಸ್ತ್ರಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";