“ಕ್ರಿಕೆಟ್ಟೆಂದರೆ.. ನನಗೆ ಅಚ್ಚುಮೆಚ್ಚು ಅಷ್ಟೇ ಅಲ್ಲ. ಬಾಲ್ಯದಿಂದಲೂ ಮೈಮನ ಮರೆಸುವ ಹುಚ್ಚು. 1983 ರ ಫೈನಲ್ಲನ್ನು ಚಿಕ್ಕ ವಯಸ್ಸಿನಲ್ಲಿ ನಿದ್ರೆಗೆಟ್ಟು ನೋಡಿ ಸಂಭ್ರಮಿಸಿದವನು. 87, 92, 96, 99, 2003, 2007, 2015, 2019, 2023 ರ ಸೋಲುಗಳನ್ನು ಸಹಿಸಲಾಗದೆ ತಿಂಗಳುಗಟ್ಟಲೆ ನರಳಿದವನು. 2007, 2011, 2013, 2024 ರ ಗೆಲುವುಗಳನ್ನು ವಾರಗಟ್ಟಲೆ ಆಚರಿಸಿದವನು. ಪ್ರತಿಪಂದ್ಯದ ಪ್ರತಿ ಚೆಂಡನ್ನು ನೋಡುವ, ಆಸ್ವಾಧಿಸುವ ಆ ಅನಂದವೇ ಅನನ್ಯ.
ಮೊನ್ನೆಯ ಗೆಲುವು ಅದೆಷ್ಟು ವಿಶೇಷ, ಗದಗದ ಕಪ್ಪತ್ತಗಿರಿ ಫೌಂಡೇಶನ್ನಿನ್ನ ಸನ್ಮಾನ ಸ್ವೀಕರಿಸಿ, ಮರಳಿ ಕೈಗಾಗೆ ಬರುವ ಪಯಣದುದ್ದಕ್ಕೂ ಆ ರೋಚಕ ಕ್ಷಣಗಳ ಪಂದ್ಯ ನೀಡಿದ ರೋಮಾಂಚನ, ಮೂಡಿಸಿದ ಸಂಚಲನ ವರ್ಣನಾತೀತ. ಇಡೀ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ ರೀತಿ ವಿಸ್ಮಯ. ಯಾರೊಬ್ಬರನ್ನೂ ಅವಲಂಬಿಸದೆ, ಸಾಂಧರ್ಭಿಕ ನಿರ್ಣಯ, ಸಾಂಘಿಕ ಹೋರಾಟ, ಸದೃಢ ಆಟದಿಂದ ಗೆದ್ದಿದ್ದು ಅತ್ಯಂತ ಅಭಿನಂದನೀಯ, ಅನುಕರಣನೀಯ, ಆದರ್ಶನೀಯ.
ಇಂತಹ ಅಪೂರ್ವ ಸಾಧನೆಗೆ ನನ್ನಂತಹ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಹೃದ್ಯಕವಿತೆಯಿದು. ಅನಂತ ಅಕ್ಕರೆ ಆರಾಧನೆಗಳ, ಅಭಿಮಾನ ನಿವೇದನೆಗಳ, ಅಮಿತ ಭಾವಸಂವೇದನೆಗಳ ಪದ್ಯಪ್ರಣತೆಯಿದು. ಒಪ್ಪಿಸಿಕೊಳ್ಳಿ ಹೆಮ್ಮೆಯ ಚಾಂಪಿಯನ್ನರೇ.”
ಚಾಂಪಿಯನ್ನರಿಗಿದೋ ಕಾವ್ಯಾರ್ಪಣೆ.!
ಭಾರತ ಬರೆದಿದೆ ಮತ್ತೊಂದು ನವ ಇತಿಹಾಸ
ಅಸಂಖ್ಯ ಭಾರತೀಯರ ಮೊಗದಿ ಮಂದಹಾಸ
ಜಗದಗಲ ಮುಗಿಲಗಲ ಸಂತಸದ ನವೋಲ್ಲಾಸ
ಇದು ಭಾರತೀಯ ಕ್ರಿಕೆಟ್ ರಣಕಲಿಗಳ ಸಾಹಸ.!
ಇಡೀ ತಂಡದ ಕೆಚ್ಚೆದೆಯ ಸ್ಥಿರ ಪ್ರದರ್ಶನವಿದು
ದಿಟ್ಟ ಸಾಂಘಿಕ ಹೋರಾಟದ ನಿಜನಿದರ್ಶನವಿದು
ಚಲ, ಅಚಲ ಮನೋಬಲಕೆ ಒಲಿದ ಯಶಸ್ಸಿದು
ಸಿದ್ದತೆ, ಕ್ಷಮತೆ, ಬದ್ದತೆಗಳಿಗೆ ಸಂದ ಶ್ರೇಯಸ್ಸಿದು.!
ತೆರೆಮರೆ ಚಾಣಕ್ಯ ಗೌತಮನ ಸಮರ್ಥ ನೇತೃತ್ವ
ಹಿಟ್ ಮ್ಯಾನ್ ರೋಹಿತನ ಚತುರ ನಾಯಕತ್ವ
ಕಿಂಗ್ ಕೊಹ್ಲಿಯ ಆಕ್ರಮಣಕಾರಿ ಆಟೋಟ ತತ್ವ
ಗಿಲ್, ಅಯ್ಯರ್, ಅಕ್ಷರರ ನೈಜ ಪ್ರತಿಭೆಯ ಸತ್ವ.!
ಒತ್ತಡಗಳ ನುಂಗುತ ಗೆಲ್ಲಿಸುವ ರಾಹುಲನ ಶೌರತ್ವ
ಸವ್ಯಸಾಚಿಯಾಟದ ಹಾರ್ದಿಕ, ರವೀಂದ್ರರ ವೀರತ್ವ
ಶಮಿಯ ವೇಗ, ಕುಲದೀಪನ ಮೋಡಿಯ ಭಾಗಿತ್ವ
ಮಿಸ್ಟರಿ ಚೆಂಡೆಸೆತಗಳ ಚಕ್ರವರ್ತಿಯ ಕರಕುಶಲತ್ವ.!
ಬಾಂಗ್ಲಹುಲಿ ಭೇಟೆಯಾಡಿ, ಪಾಕಿಗಳ ಹುಟ್ಟಡಗಿಸಿ
ಕಾಂಗರೂಗಳ ಮಣಿಸಿ ನಿಂತ ಅಪರಾಜಿತ ತಂಡ
ಲೀಗು, ಫಿನಾಲೆಯಲ್ಲು ಕಿವೀಸುಗಳ ಉಡೀಸಾಗಿಸಿ
ಭಾರತ ಹಿಡಿದು ನಿಂತಿದೆ ಜಗದೇಕವೀರನ ದಂಡ.!
ಅರಬರ ಅಂಗಳದಿ ಅರಳಿತು ಗೆಲುವಿನ ಪಾರಿಜಾತ
ವಿಜಯಪತಾಕೆ ಜಯಘೋಷ ಮುಟ್ಟಿತು ದಿಗ್ದಿಗಂತ
ಹಾರುತಿದೆ ತ್ರಿವರ್ಣಧ್ವಜ ಮೇಘಮುಗಿಲ ಮೇಲೇರಿ
ಹಾಡುತಿದೆ ಭರತಮಾತೆ ಕೀರ್ತಿಯನು ಸಾರಿ ಸಾರಿ.!
ಕೋಟಿ ಕೋಟಿ ಅಭಿನಂದನೆಗಳು ಕೆಚ್ಚೆದೆ ಕಲಿಗಳೆ
ವಿಶ್ವಚಾಂಪಿಯನ್ನರಾದ ಹೆಮ್ಮೆ ಕ್ರಿಕೆಟ್ ಹುಲಿಗಳೆ
ರಾಷ್ಟ್ರದುದ್ದಗಲಕೂ ಮಿನುಗುತಿದೆ ಆನಂದಭಾಷ್ಪ
ನಿಮ್ಮೀ ಸಾಧನೆಗಿದೋ ಅರ್ಪಣೆ ಈ ಕಾವ್ಯಪುಷ್ಪ.!
✍🏻 ಎ.ಎನ್.ರಮೇಶ್.ಗುಬ್ಬಿ.