ರಾಮದುರ್ಗ: ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-25 ನೇ ಸಾಲಿನ 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ ಮಳಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಭವಿಷ್ಯದ ಹಂತಕ್ಕೆ ಬುನಾದಿಯಾಗಿ ಪ್ರಾಥಮಿಕ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಈ ಹಂತದಿಂದಲೇ ಸಮೃದ್ಧ ಬದುಕಿನ ಕನಸುಗಳನ್ನು ವಿದ್ಯಾರ್ಥಿಗಳು ಕಾಣಬೇಕು ಎಂದರು.
ಬಿಸಿಯೂಟ ಸಿಬ್ಬಂದಿ ಹಾಗೂ ಗುರುಮಾತೆಯರಿಗೆ ಶಾಲೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಿಯೋಜಿತ ಶಿಕ್ಷಕ ರಾಜೇಂದ್ರ ಎಮ್ ಎ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕುನ್ನಾಳ ಶಾಲೆಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಷಯ, ನನಗೆ ಅತೀ ಕಡಿಮೆ ಅವದಿ ಇಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈ ಶಾಲೆ ಎಲ್ಲ ಸರಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಶಾಲೆಗಳಿಗೆ ಪ್ರೇರಣೆಯಾಗಿದೆ ಎಂದರು.
ಶಿಕ್ಷಕ ವಿ ಆರ್ ಅಣ್ಣಿಗೇರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭವಿಷ್ಯದ ದಿನಗಳಿಗೆ ಶುಭ ಹಾರೈಸಿದರು. 6, 7 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಈ ಶಾಲೆಯಲ್ಲಿನ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿ ತಮಗೆ ಶಿಕ್ಷಣ ನೀಡಿದ ಗುರುಗಳನ್ನು ನೆನೆದರು.
ಈ ಸಂದರ್ಭದಲ್ಲಿ ವಿಠ್ಠಲ ಗುಡಗುಡಿ, ಹಣಮಂತ ಗಾಣಿಗೇರ, ಈರಣ್ಣ ಸಿದ್ನಾಳ, ಗಿರೆಪ್ಪ ಮಳಲಿ, ಬಸವರಾಜ ಸುಣಧೋಳಿ, ಪ್ರವೀಣ ಹುದ್ದಾರ, ರವಿ ಹಲ್ಯಾಳ, ಗುರುಪಾದಪ್ಪ ಅಳ್ಳಿಗಿಡದ, ಮುಖ್ಯ ಶಿಕ್ಷಕ ಬಿ ಬಿ ಹಾಲೊಳ್ಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಪ್ರೀತಿಯ ಭೋಜನವನ್ನು ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯತ ಸದಸ್ಯರು, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.
ಶಿಕ್ಷಕ ಸಂಗಮೇಶ ಸೊಗಲದ ನಿರೂಪಿಸಿದರು, ಎಫ್ ಎನ್ ಕುರಬೇಟ ಸ್ವಾಗತಿಸಿದರು. ಎಸ್ ಎ ಕಳ್ಳಿ ವಂದಿಸಿದರು.