ಸವದತ್ತಿ: ಉತ್ತರ ಕರ್ನಾಟಕ ಶಕ್ತಿ ದೇವಿಯಾದ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಕಾಣಿಕೆಯ ಹುಂಡಿ ಎಣಿಕೆ ಕಾರ್ಯ ಮುಗಿದಿದೆ. ರೂ. 3.68 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಪ್ರತಿಬಾರಿಗಿಂತ ಈ ಬಾರಿ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ. 2024 ರ ಡಿಸೆಂಬರ್ 14 ರಿಂದ 2025 ರ ಮಾರ್ಚ್ 12ರವರೆಗೆ (89 ದಿನ) ಕಾಣಿಕೆ ಎಣಿಕೆ ಮಾಡಲಾಗಿದೆ.
ಹುಂಡಿಗಳಲ್ಲಿ ರೂ. 3.40 ಕೋಟಿ ನಗದು, ರೂ. 20.82
ಲಕ್ಷ ಮೌಲ್ಯದ ಚಿನ್ನಾಭರಣ, ರೂ. 6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿವೆ. ಅಮೆರಿಕ, ನೆದರ್ಲೆಂಡ್ ಮುಂತಾದ ದೇಶಗಳ ಕರೆನ್ಸಿಗಳು ಹುಂಡಿಯಲ್ಲಿ ಸಿಕ್ಕಿವೆ. ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ. ಕಳೆದ
ವರ್ಷ ಹೆಚ್ಚಿನ ಭಕ್ತರು ಬಂದಿರಲಿಲ್ಲ.
ನಿರೀಕ್ಷೆಯಷ್ಟು ಕಾಣಿಕೆ ಬಂದಿರಲಿಲ್ಲ. ಆದರೆ, ಈ ಬಾರಿ ಸಮೃದ್ಧ ಮಳೆಯಾಗಿ ಉತ್ತಮ ಫಸಲು ಬಂದಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಣವನ್ನು ದೇವಸ್ಥಾನದ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ.
ಅಭಿವೃದ್ಧಿ ಕೆಲಸಕ್ಕೆ ಭಕ್ತರಿಗೆ ಸೌಕರ್ಯ ಕಲ್ಪಿಸಲು ಅದನ್ನು ಬಳಸಲಾಗುವುದು ಎಂದು ಸವದತಿ ಯಲ್ಲಮ್ಮದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್