ಹುಕ್ಕೇರಿ: ತಾಲೂಕಿನ ಜಿನರಾಳ,ಚಿಲಬಾವಿ, ಅರಳಿಕಟ್ಟಿ ಹಿಡಕಲ್ ಡ್ಯಾಮ್ ಬೇಡರ ಹಟ್ಟಿ ಮತ್ತು ಯಮುಕನಮರಡಿ ಸಮೀಪದ ಹತ್ತಿರ ಇರುವ ಗುಡ್ನಟ್ಟಿ ಹಾಗೂ ಚಿಲಬಾವಿ, ಅರಳಿಕಟ್ಟಿ ಹಿಡಕಲ್ ಡ್ಯಾಮ್ ಸೇರಿದಂತೆ ಹಲವಾರು ಗ್ರಾಮಗಳ ಸುತ್ತ ಹಿಡಕಲ್ ಜಲಾಶಯದಲ್ಲಿ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಈ ಹಿಂದೆ ಹಲವಾರು ಬಾರಿ ದಾಳಿ ನಡೆದರೂ, ಮರಳು ದಂಧೆ ಪುನಃ ಚುರುಕುಗೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೌನ ಸಾರ್ವಜನಿಕರಲ್ಲಿ ಭಾರಿ ಅನುಮಾನ ಮೂಡಿಸಿದೆ.
ಚಿಲಬಾವಿ ಮತ್ತು ಅರಳಿಕಟ್ಟಿ ಗ್ರಾಮಗಳ ಹತ್ತಿರವೂ ಡ್ಯಾಮಿನ ತಡೆಗೋಡೆಯ ಪಕ್ಕದಲ್ಲಿ ಮರಳು ಗಣಿಗಾರಿಕೆ ಭಾರಿ ಜೋರಾಗಿದ್ದು, ಇದರಿಂದ ಡ್ಯಾಮಿಗೆ ಹಾನಿಯ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಈ ಪ್ರದೇಶದಲ್ಲಿ ನೀರಿನ ಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೂ ಸಹ ದಿನನಿತ್ಯ ಗಮನಹರಿಸಬೇಕಾದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಡಕಲ್ ಡ್ಯಾಮ್ ಬಳಿ ಪೊಲೀಸ್ ಹೊರಠಾಣೆ (ವೊಪಿ) ಹಾಗೂ ನೀರಾವರಿ ಕಚೇರಿ ಹತ್ತಿರವೇ ಟಿಪ್ಪರ್ ವಾಹನಗಳು ನಿರಂತರವಾಗಿ ಸಂಚರಿಸುತ್ತಿದ್ದರೂ, ಈ ವಾಹನಗಳ ಪರವಾನಗಿಗಳನ್ನು ಪರಿಶೀಲನೆ ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಯಾವುದೇ ದಾಖಲೆಗಳಿಲ್ಲದೇ ಟಿಪ್ಪರ್‌ಗಳು ನಿರ್ಬಂಧಿತ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಬಹಳ ಗಂಭೀರ ವಿಚಾರ. ಇದನ್ನು ತಡೆಯಬೇಕಾದ ಪೋಲಿಸ್ ಇಲಾಖೆ ಹಾಗೂ ಡ್ಯಾಮ್ ಇಲಾಖೆಯ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವಂತೆ ತೋರುತ್ತಿದೆ.
ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಗಣಿ ಇಲಾಖೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. “ನಾವು ಮಾಹಿತಿ ಹೊಂದಿದ್ದೇವೆ, ಆದರೆ ಸಮನ್ವಯವಾಗಿ ಕಾರ್ಯಾಚರಣೆ ನಡೆಸಬೇಕಾಗಿದೆ” ಎಂಬ ಸಾಧಾರಣ ಉಡಾಫೆಯ ಪ್ರತಿಕ್ರಿಯೆ ಹೊರತು, ಇನ್ನೊಂದು ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ನಿಲುವಿನಿಂದ ಗಣಿ ಇಲಾಖೆ ಅಧಿಕಾರಿಗಳು ಮರಳು ದಂಧೆಕೋರರ ಬೆಂಬಲದಲ್ಲಿಯೇ ಇದ್ದಾರೆಯೇ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವುದಂತೂ ಸಹಜ.
ಹಿಡಕಲ್ ಡ್ಯಾಮ್ ಹಾಗೂ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ, ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯ. ಜೊತೆಗೆ ಚೆಕ್‌ಪೋಸ್ಟ್‌ಗಳನ್ನು ಬಲಪಡಿಸಿ, ನಿರಂತರ ನಿಗಾವಹಿಸಬೇಕು. ಇದರಿಂದ ಅಕ್ರಮ ಮರಳು ಸಾಗಾಟವನ್ನು ತಡೆಯಲು ಅನುಕೂಲವಾಗಬಹುದು.
ಬೆಳಗಾವಿ ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡುವ ಭರವಸೆ ನೀಡಿದ್ದರು. ಆದರೆ, ಇನ್ನೂ ಸಮಿತಿ ರಚನೆಯಾಗದೆ, ಮರಳು ದಂಧೆ ಮಾತ್ರ ಮುಂದುವರಿದಿದೆ. ಈ ಸಮಿತಿ ಕೇವಲ ಕಾಗದ ಮೇಲಿನ ತಯಾರಿ ಮಾತ್ರವೋ? ಅಥವಾ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿದೆಯೋ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ. ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಗಣಿ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ದಾಳಿ ನಡೆಸಿ, ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ದಂಧೆ ಮತ್ತಷ್ಟು ಬಲವಂತವಾಗಿ ಮುಂದುವರಿಯುವ ಭೀತಿ ಉಂಟಾಗಿದೆ ಎಂಬ ಸಾರ್ವಜನಿಕರ ಆಗ್ರಹಿಸಿದ್ದಾರೆ.