ಬೈಲಹೊಂಗಲ: ತಾಲೂಕಿನ ಇಂಚಲ ಗ್ರಾಮದಲ್ಲಿ ನವವಿವಾಹಿತೆ ಕಿಟನಾಶಕ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಶುಕ್ರವಾರ ಬಿಮ್ಸ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಲಕ್ಷ್ಮೀ ಮಂಜುನಾಥ ಹೂಗಾರ್ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಡಿಸೆಂಬರ್ 7 ರಂದು ತಮ್ಮ ಮಾವನ ಮಗ ಮಂಜುನಾಥ ಜೊತೆಗೆ ಲಕ್ಷ್ಮೀ ಮದುವೆಯಾಗಿದ್ದಳು. ಮದುವೆಯಾಗಿ ಐದು ತಿಂಗಳ ಒಳಗೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಕೀಟನಾಶಕ ಮಾತ್ರೆ ನುಂಗಿ ಅಸ್ವಸ್ಥಗೊಂಡಿದ್ದ ಲಕ್ಷ್ಮೀಯನ್ನು ಮೊದಲು ಕುಟುಂಬಸ್ಥರು ಬೈಲಹೊಂಗಲದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ವೈದ್ಯರ ಸಲಹೆಯಂತೆ ಕೂಡಲೇ ಲಕ್ಷ್ಮೀಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಲಕ್ಷ್ಮೀ ಮೃತಪಟ್ಟಿದ್ದಾಳೆ.
ಲಕ್ಷ್ಮೀ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೀಗೆ ಆಗಾಗ ಆರೋಗ್ಯ ಸಮಸ್ಯೆ ಆಗುತ್ತಿತ್ತು ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೂ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮೀ ಪತಿ ಮಂಜುನಾಥ, ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿತ್ತು ನಾನು ಕಷ್ಟಪಟ್ಟು ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಿದ್ದೆ. ನಿನ್ನೆಯಷ್ಟೆ ಆಕೆಯನ್ನು ಆಸ್ಪತ್ರೆಗೆ ತೋರಿಸಿ ಇಂದು ನಾನು ಕೆಲಸಕ್ಕೆ ಹೋಗಿದ್ದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಹೀಗೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದರು.
ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳಿಸಿಸಲಾಗಿದೆ.