ಹುಕ್ಕೇರಿ: ತಾಲೂಕಿನ ದಡ್ಡಿ ಗ್ರಾಮದ ಹಳೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಗ್ರಂಥಪಾಲಕರು ಸಮಯಕ್ಕೆ ಸರಿಯಾಗಿ ಬಾಗಿಲು ತೆಗೆಯುವುದಿಲ್ಲ.
ಪಂಚಾಯತಿ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಗ್ರಂಥಾಲಯ ಸಮಯಕ್ಕೆ ಸರಿಯಾಗಿ ಬಾಗಿಲು ತೆಗೆಯದೆ ತಮಗೆ ಮನಸ್ಸೋ ಇಚ್ಛೆ ವೇಳೆ ಸಿಕ್ಕಾಗ ಬಾಗಿಲು ತೆಗೆಯುತ್ತಾರೆ ಎನ್ನುತ್ತಾರೆ ಗ್ರಾಮದ ಅನೇಕರು.
ಬಹುತೇಕರಿಗೆ ಇಲ್ಲಿ ಗ್ರಂಥಾಲಯ ಇದೇ ಎಂಬುದೇ ಗೊತ್ತಿಲ್ಲ. ಗ್ರಂಥಾಲಯಕ್ಕೆ ಓದಲು ಹೋಗುವವರ ಸಂಖ್ಯೆಯು ಕಡಿಮೆಯಾಗಿದೆ. ಈಗ ಶಾಲೆಗಳಿಗೆ ಬೇಸಿಗೆ ರಜೆಯ ನಿಮಿತ್ತ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಚಿಣ್ಣರ ಕನಸುಗಳ ಬೆನ್ನಟ್ಟುವ ಬೇಸಿಗೆ ಸಂಭ್ರಮ ಎಂಬ ಕಾರ್ಯಕ್ರಮ ಸರ್ಕಾರ ಹಮ್ಮಿಕೊಳ್ಳಲು ಆದೇಶ ಹೊರಡಿಸಿದೆ. ಆದರೆ, ಈ ಗ್ರಂಥಾಲಯದಲ್ಲಿ ಆದೇಶವನ್ನು ಗಾಳಿಗೆ ತೋರುತ್ತಿದ್ದಾರೆ.
ಮುಂಜಾನೆ 9:00 ಗಂಟೆಗೆ ಗ್ರಂಥಾಲಯದ ಬಾಗಿಲು ತೆಗೆಯಬೇಕಾದ ಸಮಯವಿದ್ದರೂ 10:30 ಗಂಟೆ ನಂತರ ಬಂದು ಬಾಗಿಲು ತೆಗೆಯುತ್ತಿದ್ದಾರೆ. ವಿದ್ಯಾರ್ಥಿಗಳು ಒಂಬತ್ತು ಗಂಟೆಗೆ ಬಾಗಿಲು ಹತ್ರ ಬಂದು ನಿಂತು ನೋಡಿ ಮರಳಿ ಹೋಗುತ್ತಿದ್ದಾರೆ. ಅಲ್ಲಿದ್ದ ವಿದ್ಯಾರ್ಥಿಗಳಿಗೆ ಎರಡು ಮೂರು ಆಟದ ಸಾಮಗ್ರಿಗಳನ್ನು ನೀಡಿ ಆಟಕ್ಕೆ ಹಚ್ಚುತ್ತಿದ್ದಾರೆ. ಇನ್ನು ಉಳಿದ ಸ್ಪೋಕನ್ ಇಂಗ್ಲೀಷ್, ಪರಿಸರ ಪ್ರೇಮ ಬೆಳೆಸುವುದು, ಮೆಹಂದಿ ಕಲೆ, ಏಕಾಂಗಿ ನೃತ್ಯ, ನಾಟಕ ಅಭಿನಯ, ನೈತಿಕ ಶಿಕ್ಷಣ, ವಾದ್ಯ ನುಡಿಸುವಿಕೆ ಸೇರಿದಂತೆ ಇನ್ನೂ ವಿವಿಧ ಪ್ರೇರಣಾತ್ಮಕ ತರಬೇತಿಗಳನ್ನು ನೀಡುತ್ತಿಲ್ಲ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಂಥಾಲಯದ ಕಡೆ ಸ್ವಲ್ಪ ಗಮನ ಹರಿಸಬೇಕು ಎನ್ನುತ್ತಿದ್ದಾರೆ. ಇನ್ನಾದರೂ, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡಬೇಕಾಗಿದೆ.
ವರದಿ: ಕಲ್ಲಪ್ಪ. ಪಾಮನಾಯಿಕ