ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಕಬಡ್ಡಿ, ವಾಲಿಬಾಲ್, ಖೊಖೊ ಸೇರಿದಂತೆ ಅನೇಕ ಕ್ರೀಡೆಗಳನ್ನು ಮೊಬೈಲ್ ನುಂಗಿದ್ದು, ಮೈದಾನದಲ್ಲಿ ಸಮಯ ಕಳೆಯುವ ಬದಲು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರಿಂದ ಅವರ ದೈಹಿಕ ಕ್ಷಮತೆ ಕಡಿಮೆಯಾಗುತ್ತಿದೆ. ದೈಹಿಕ ಪೋಷಣೆಗೆ ಕ್ರೀಡೆ ಅತ್ಯವಶ್ಯಕ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣದ ನಿರ್ದೇಶಕ ಡಾ. ಪಿ. ವಿ. ಕಡಗದಕಾಯಿ ಅಭಿಪ್ರಾಯಪಟ್ಟರು.
ಅವರು ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ಎಫ್.ವಿ. ಮಾನ್ವಿ ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ತಂಡ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆಗೆ ಉತ್ತೇಜನ ನೀಡುತ್ತದೆ. ಕಾರಣ ಎಲ್ಲರೂ ಸಕ್ರಿಯವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಪಟಗುಂದಿ, ಪ್ರಾಧ್ಯಾಪಕ ಹಾಗೂ ಕ್ರೀಡಾ ಸಂಯೋಜಕ ಆನಂದ ಬಂಕದ, ದೈಹಿಕ ನಿರ್ದೇಶಕ ವಿ.ಎಸ್. ಅರಳಿಮಟ್ಟಿ, ಶ್ರೀಧರ ನೇಮಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.