ಬೆಳಗಾವಿ: ದೇಶದ ಪ್ರಗತಿಗೆ ಕಾರಣವಾಗಿರುವ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಇಂಜಿನಿಯರ್ ಗಳ ಪಾತ್ರ ಅಪಾರವಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಮಂಗಳವಾರ ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಬದುಕಿನಲ್ಲಿ ಹಣವಿದ್ದರೆ ಮಾತ್ರ ಸಾಲದು. ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ನಮ್ಮನ್ನು ಆದರದಿಂದ ಗೌರವಿಸುತ್ತದೆ.
ಇಂಜನಿಯರಿಂಗ್ ಪದವಿ ಜನಸೇವೆಗಾಗಿ ಮೀಸಲಿಡಬೇಕೆ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ. ಓರ್ವ ಯಶಸ್ವಿ ಎಂಜಿನಿಯರ್ ಆಗುವುದಕ್ಕಿಂತ ಸಮಾಜ ಸೇವೆ ಮಾಡುವ ಒಳ್ಳೆಯ ನಾಗರಿಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಗೋಕುಲ್ ಫೆರೋಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಬಿ. ಲಾಂಡ್ಗೆ, ವೃತ್ತಿಪರ ಜೀವನದಲ್ಲಿ ಧೈರ್ಯ, ನವೋತ್ಪಾದನೆ ಮತ್ತು ನೈತಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾರು ಬೇಕಾದರೂ ಯಶಸ್ವಿ ಇಂಜನಿಯರ್ ಆಗಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ, ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಡಾ. ಎಫ್. ವಿ. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ವಿಲಾಸ ಬಾದಾಮಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಸ್ವಾಗತಿಸಿದರು. ಅಕಾಡೆಮಿಕ್ಸ್ ಡೀನ್ ಡಾ. ಅಶೋಕ್ ಹುಲಗಬಾಳಿ ವರದಿ ವಾಚಿಸಿದರು. ಕೊನೆಗೆ ಡಾ. ಯಾಸ್ಮೀನ್ ಶೇಖ್ ವಂದಿಸಿದರು.