ಬೆಳಗಾವಿ: ಇಲ್ಲಿನ ಶಿವಬಸವ ನಗರದ ಶ್ರೀ ಕಾರಂಜಿಮಠದಲ್ಲಿ, ಜೂ. 09 ಸೋಮವಾರದಂದು 287ನೇಯ ಮಾಸಿಕ ಶಿವಾನುಭವ ಮತ್ತು ಡಾ. ಬಸವರಾಜ ಜಗಜಂಪಿ ಅವರ ಅಭಿನಂದನಾ ಸಮಾರಂಭ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ, ವಿಶ್ರಾಂತ ಪ್ರಾಚಾರ್ಯರು ಹಾಗೂ ವಿದ್ವಾಂಸರಾದ ಡಾ. ಬಸವರಾಜ ಜಗಜಂಪಿ ಮಾತನಾಡಿ, ನನ್ನ ಬೆಳವಣಿಗೆಯಲ್ಲಿ ಸಿದ್ದೇಶ್ವರ ಅಪ್ಪಾಜಿಯವರ ಪಾತ್ರ ಎಷ್ಟೋ ಅಷ್ಟೇ ಮಲ್ಲಯ್ಯ ಅಜ್ಜಯ್ಯನವರದ್ದಾಗಿದೆ. ಯಾವುದೇ ಒಂದು ಪುಸ್ತಕ ಅಚ್ಚುಕಟ್ಟಾಗಿ ಬರಬೇಕಾದರೆ ಅದರ ಹಿಂದೆ ಬಹಳ ಶ್ರಮ ಇರುತ್ತದೆ. ಅಂತಹ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಅಪ್ಪನವರು ಸಮಾಜದಲ್ಲಿ ಯಾರೇ ಏನೇ ಸಾಧನೆಗೈದರೂ, ತೊಂದರೆ ಹಾಗೂ ನೋವಲ್ಲಿದ್ದರೂ ಮೊದಲಿಗೆ ಕೈ ಹಿಡಿದವರು ಕರಂಜಿಮಠದ ಅಪ್ಪನವರು. ಯಾವುದನ್ನ ನಾವೂ ಬಯಸದೆ ಸಿಗುತ್ತದೋ ಅದು ನಮಗೆ ಸಂತೋಷ ಕೊಡುತ್ತದೆ. ಅಂತಹ ಸಂತಸ ಇಂದು ಆಗಿದೆ. ನನ್ನ ಒಂದು ಧ್ಯೇಯ ವಾಕ್ಯ ಅಂದರೆ ಕೇವಲ ಕೊಟ್ಟ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುವುದು ಅದನ್ನ ನಾನು ಮಾಡಿದ್ದೇನೆ ಅಷ್ಟೇ. ಈ ಪರಿಣತಮತಿ ಗ್ರಂಥ ಸಹ ಕವಿರಾಜ ಮಾರ್ಗ ದಲ್ಲಿ ಬರುವ ಜನಪದರಿಗೆ ಸಮರ್ಪಣೆ. ಯಾಕೆಂದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಜನಪದರ ಕೊಡುಗೆ ಅಪಾರ ಇದೆ ಅದನ್ನ ನಾವು ನೆನೆಯಲೇ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಶ್ರೀ ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠ ಬೆಳಗಾವಿ, ಪೂಜ್ಯಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಶಿವಾನಂದ ಮಠ ಗೋಡ್ಗೇರಿ, ಹಿರಿಯ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಡಾ. ಮಹೇಶ್ ಗುರನಗೌಡ, ಪ್ರಕಾಶ ಗಿರಿಮಲ್ಲನವರ ಹಾಗೂ ಸಕಲ ಶರಣ ಶರಣೆಯರು ಉಪಸ್ಥಿತರಿದ್ದರು.