ವೃದ್ಧಾಶ್ರಮದ ಆರು ದಿನಗಳ ಯೋಗ ಶಿಬಿರಕ್ಕೆ ಚಾಲನೆ
ಬೆಳಗಾವಿ: ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮ, ದೇವರಾಜ ಅರಸ್ ಕಾಲೋನಿ, ಬಸವನಕುಡಚಿ ಮತ್ತು ಪತಂಜಲಿ ಯೋಗ ಸಮಿತಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ – 2025 ಅಂಗವಾಗಿ ಆರು ದಿನಗಳ ವಿಶೇಷ ಯೋಗ ಶಿಬಿರಕ್ಕೆ ಸೋಮವಾರದಂದು ಚಾಲನೆ ದೊರೆಯಿತು.
ಜೂನ್ 16ರಿಂದ 21ರ ವರೆಗೆ ಪ್ರತಿದಿನ ಬೆಳಿಗ್ಗೆ 5.30ರಿಂದ 7.00ರ ವರೆಗೆ ನಡೆಯುವ ಈ ಶಿಬಿರದ ಮೊದಲ ದಿನದ ಕಾರ್ಯಕ್ರಮವನ್ನು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಮೋಹನ್ ಬಾಗೇವಾಡಿಯವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಯೋಗಾಭ್ಯಾಸ ತರಬೇತಿ ನೀಡಲಾಯಿತು.
ಮಾತನಾಡಿದ ಅವರು, “ಯೋಗವು ಭಾರತದ ಪವಿತ್ರ ಪರಂಪರೆಯಿಂದ ಬಂದ ಶ್ರೇಷ್ಠ ಆಧ್ಯಾತ್ಮಿಕ ಹಾಗೂ ಶಾರೀರಿಕ ಸಾಧನೆ ಆಗಿದ್ದು, ಇದು ಮಾನಸಿಕ ಹಾಗೂ ದೈಹಿಕ ಸುಸ್ಥಿತಿಗೆ ದಾರಿ. ಯೋಗ ಅಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ದೇಹದ ವ್ಯವಸ್ಥೆಗಳು ಸುಧಾರಿತವಾಗುತ್ತವೆ. ಶಿಸ್ತು, ಸಹನೆ, ಸಂಯಮ ವ್ಯಕ್ತಿತ್ವದ ಭಾಗವಾಗುತ್ತವೆ” ಎಂದು ವಿವರಿಸಿದರು.
ಈ ವೇಳೆ, ವೃದ್ಧಾಶ್ರಮದ ಸಂಯೋಜಕರಾದ ಎಂ.ಎಸ್. ಚೌಗಲ, ಭಾರತ್ ಸ್ವಾಭಿಮಾನ ಟ್ರಸ್ಟ್‌ನ ಪುರುಷೋತ್ತಮ್ ಪಟೇಲ್, ಯೋಗ ಶಿಕ್ಷಕರು ರಮೇಶ್ ಮಹಡಿಕ್ ಹಾಗೂ ಶ್ರೀಮತಿ ರೂಪ ಮಹಡಿಕ್, ನಗರ ಸೇವಕರಾದ ಬಸವರಾಜ್ ಮೋದಗೇರಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವೈಜಯಂತಿ ಚೌಗಲ ಹಾಗೂ ವೃದ್ಧಾಶ್ರಮದ ಹಿರಿಯರು, ಸಿಬ್ಬಂದಿ, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.