ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿ ಭರ್ಜರಿಯಾಗಿ ಹರಿಯುತ್ತಿದೆ. ಈ ಪ್ರವಾಹದಿಂದಾಗಿ ನದಿಯಲ್ಲಿ ಅಪರೂಪದ ಬೃಹತ್ ಬಾಳಿ ಮೀನು ಒಂದು ಸೆರೆ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೀನುಗಾರ ಸಾಗರ ಅವರು ಬಲೆಗೆ ಬಿದ್ದ ಈ ಮೀನು ಹಿಡಿದಿದ್ದಾರೆ. ಸಿಕ್ಕಿರುವ ಬಾಳಿ ಮೀನು ಸುಮಾರು 20 ಕೆಜಿ ತೂಕ ಹೊಂದಿದ್ದು, ಇದೊಂದು ಅಪರೂಪದ ಮತ್ತು ಮೌಲ್ಯಯುತ ಜಾತಿಯ ಮೀನು ಎನ್ನಲಾಗಿದೆ. ಸ್ಥಳೀಯರ ಹುಬ್ಬೇರಿಸುವಂತಹ ಈ ಅಪರೂಪದ ಮೀನು ಸುದ್ದಿ ಇಡೀ ಗ್ರಾಮದಲ್ಲಿ ಕುತೂಹಲ ಮೂಡಿಸಿದೆ.