ಹಿಡಕಲ್ ಡ್ಯಾಂನಲ್ಲಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಭಾವುಕ ಪ್ರದರ್ಶನ
ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿನ ಶ್ರೀ ಶಿವಾಲಯ ಮಂದಿರದ ಸಭಾಭವನದಲ್ಲಿ ಗುರುವಾರ (26-06-2025) ರಂದು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ “ಮಲ್ಯಾಡಿ ಚಿಕ್ಕಮ್ಮ” ಎಂಬ ಪೌರಾಣಿಕ ಕಥಾಪ್ರಸಂಗವನ್ನು ಆಧರಿಸಿದ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಗೆ ವಿಶಿಷ್ಟ ಮನರಂಜನೆ ನೀಡಿದುದಲ್ಲದೆ, ಪೌರಾಣಿಕ ಕಥಾನಕದ ಒಳನೋಟವನ್ನು ಮನಮುಗಿದು ಆಸ್ವಾದಿಸಲು ಅವಕಾಶ ನೀಡಿತು. ಈ ಕಾರ್ಯಕ್ರಮಕ್ಕೆ ಯುವ ಧುರೀಣ ಆರ್. ಕರುಣಾಕರ ಶೆಟ್ಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮ ಉಚಿತವಾಗಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದು, ಕೋಡಿ ವಿಶ್ವನಾಥ ಗಾಣಿಗ ಮತ್ತು ಜಿ. ರಾಘವೇಂದ್ರ ಮಯ್ಯ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು. ಕಲಾವಿದರ ಸಜಿವ ಅಭಿನಯ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಸಂಗೀತ ವೈಭವ ಪ್ರೇಕ್ಷಕರನ್ನು ಸೆಳೆಯಿತು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಯಮಕನಮರಡಿ ಠಾಣೆಯ ಸಿಪಿಐ ಜಾವೇದ ಮುಷಾಪುರಿ ಮಾತನಾಡಿ, “ಇಂದು ನಶಿಸುತ್ತಿರುವ ಭಾರತೀಯ ಸಂಸ್ಕೃತಿಯ ನಡುವೆಯೂ ಇಂತಹ ಪೌರಾಣಿಕ ಯಕ್ಷಗಾನ ಪ್ರಸಂಗಗಳು ಜೀವಂತವಾಗಿರುವುದು ಉಡುಪಿ ಜಿಲ್ಲೆಯ ಕಲಾವಿದರ ಪ್ರಯತ್ನದ ಫಲ. ಇವು ಯುವಪೀಳಿಗೆಗೆ ನಿಜವಾದ ಸಾಂಸ್ಕೃತಿಕ ಪಾಠ ನೀಡುತ್ತವೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗಣೇಶ ಪೂಜಾರಿ, ವಿಜಯ ಶೆಟ್ಟಿ, ಉದಯ ಶೆಟ್ಟಿ, ಅಶೋಕ್ ಶೆಟ್ಟಿ, ಸಮಾಜ ಸೇವಕ ಚಂದ್ರಶೇಖರ ಗಣಾಚಾರಿ, ಹೊಸಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಸದಾನಂದ ಮಾಳ್ಯಾಗೋಳ, ವಿನೋದ ಚಂದಪ್ಪ ಗೋಳ, ಶ್ರೀಧರ ನಾಯಕ, ಮಲ್ಲಪ್ಪ ಸಾರವಾಡಿ, ಮಹಾಂತೇಶ ಪಂಚನ್ನವರ, ಮಹಾದೇವ ತಹಶೀಲ್ದಾರ, ಹಿರಿಯ ಸಾಹಿತಿ ಎಸ್.ಎಂ. ಶಿರೂರ, ಮಕ್ಕಳ ಸಾಹಿತಿ ಪ್ರಕಾಶ ಹೊಸಮನಿ ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಎ.ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
9164577143