ಸದಲಗಾ: ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ನವನಾಥ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳರು ಶೆಟರ್ ಮುರಿದು ಒಳನುಗ್ಗಿ ಬಹುದೊಡ್ಡ ದೋಚು ನಡೆಸಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ವಿನಾಯಕ ವಿಜಯಕುಮಾರ ಮಾಳಿ ಅವರು ಸದಲಗಾ ಠಾಣೆಗೆ ದೂರು ನೀಡಿದ್ದಾರೆ.
ಕಳ್ಳರು ಸುಮಾರು 9 ಕೆಜಿ ಬೆಳ್ಳಿ ಆಭರಣ (ಅಂದಾಜು ಮೌಲ್ಯ ರೂ. 8 ಲಕ್ಷ) ಮತ್ತು ರೂ. 16,000 ನಗದು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಲಭ್ಯವಾದ ಡಿಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ ಮತ್ತು ಪಿಎಸ್‌ಐ ಶಿವಕುಮಾರ್ ಬಿರಾದಾರ ಅವರ ನೇತೃತ್ವದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಯಿಸಿ ತನಿಖೆ ಮುಂದುವರೆಸಲಾಗಿದೆ.
ಘಟನೆ ನಡೆಯುವ ವೇಳೆ ಚನ್ನಮ್ಮ ವೃತ್ತದಲ್ಲಿ ಇದ್ದ ಹೈಮಾಸ್ಟ್ ದೀಪ ಕಳೆದ ಎರಡು-ಮೂರು ದಿನಗಳಿಂದ ಆಫ್ ಆಗಿದ್ದರಿಂದ ಕಳ್ಳರು ಕತ್ತಲೆಯನ್ನು ಉಪಯೋಗಿಸಿಕೊಂಡಿದ್ದಾರೆ. ಇನ್ನುಚನ್ನಮ್ಮ ವೃತ್ತ ಮತ್ತು ಮಹಾಲಿಂಗಸ್ವಾಮಿ ಶಾಲೆಯ ನಡುವಿನ ರಸ್ತೆಯಲ್ಲಿ ರಸ್ತೆ ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾಗಳು ತಾತ್ಕಾಲಿಕವಾಗಿ ತೆಗೆದುಹಾಕಲ್ಪಟ್ಟಿದ್ದವು.
ಮಹತ್ವದ ಸಂಗತಿಯೆಂದರೆ, ದುಷ್ಕರ್ಮಿಗಳು ಬುದ್ಧ ವಿಹಾರ ಮುಂಭಾಗದಲ್ಲಿದ್ದ ಎರಡು ದ್ವಿಚಕ್ರ ವಾಹನಗಳನ್ನು ಸಹ ಕದಿದುಕೊಂಡಿದ್ದಾರೆ. ಘಟನೆಯ ಬಳಿಕ ಖಾಸಗಿ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಕಳ್ಳರ ಓಡಾಟದ ದೃಶ್ಯ ಸೆರೆಯಾಗಿದ್ದು, ಆ ದೃಶ್ಯಾಧಾರದಲ್ಲಿ ಪೊಲೀಸರು ಈಗ ಬಲೆ ಬೀಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳೀಯ ವ್ಯಾಪಾರಸ್ಥರಲ್ಲಿ ಭಯ ಮತ್ತು ಆತಂಕದ ವಾತಾವರಣ ಉಂಟಾಗಿದ್ದು, ವ್ಯಾಪಾರ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143