– ಲಕ್ಷ್ಮೀ ದೇವಿ ಜಾತ್ರೆ ಜೂನ್ 30 ರಿಂದ ಜುಲೈ 8ರ ವರೆಗೆ –
ಬೆಳಗಾವಿ: ಇತಿಹಾಸ ಪ್ರಸಿದ್ಧ ಕರದಂಟು ನಾಡು ಮತ್ತೆ ಜಾತ್ರಾ ಸಂಭ್ರಮದಲ್ಲಿ ತೇಲುತ್ತಿದೆ. ಗೋಕಾಕನ ಮಹಾಲಕ್ಷ್ಮೀ ದೇವಿಯ ಅದ್ಧೂರಿ ಜಾತ್ರಾ ಮಹೋತ್ಸವ ಇಂದು ಜೂನ್ 30ರಿಂದ ಜುಲೈ 8ರ ವರೆಗೆ ನಡೆಯಲಿದ್ದು, ದೇವಿಯ ದರ್ಶನಕ್ಕಾಗಿ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ.
ಈ ಬಾರಿ ಲಕ್ಷ್ಮೀ ದೇವಿ ಜಾತ್ರೆ ವಿಶೇಷವಾಗಿದ್ದು, ಇದೊಂದು ದಶಕದ ನಂತರ ನಡೆಯುತ್ತಿದೆ. ಸಾಮಾನ್ಯವಾಗಿ ಪ್ರತಿ 5 ವರ್ಷಕ್ಕೊಮ್ಮೆ ಜಾತ್ರೆ ನಡೆಯುವ ಈ ನಾಡಿನಲ್ಲಿ, ಹತ್ತು ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವ ಕಾರಣ ಭಕ್ತರಲ್ಲಿ ಅಪಾರ ಉತ್ಸಾಹ ಮೂಡಿದೆ.
ಲಕ್ಷಾಂತರ ಭಕ್ತರ ಆಗಮನಕ್ಕೆ ಸಜ್ಜಾದ ಗೋಕಾಕ
ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದು, ಸರ್ವಧರ್ಮೀಯರು ಭಕ್ತಿಭಾವದಿಂದ ದೇವಿಯ ಸೇವೆಯಲ್ಲಿ ತೊಡಗಿದ್ದಾರೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಸಂಬಂಧಿಕರ ಆಮಂತ್ರಣ, ಭಕ್ತಿ, ಹರಕೆ ತೀರಿಸುವ ಧರ್ಮಚಟುವಟಿಕೆಗಳು ಜೋರು ಪಡೆದುಕೊಂಡಿವೆ.
ರಥೋತ್ಸವದ ಭವ್ಯ ತಯಾರಿ
ಲಕ್ಷ್ಮೀ ದೇವಿ ಹಾಗೂ ದ್ಯಾಮವ್ವಾ ದೇವಿಯರ ರಥಗಳನ್ನು ಉಡಪಿ ಜಿಲ್ಲೆಯ ಕೋಟೇಶ್ವರದಲ್ಲಿ 46 ವಿಶ್ವಕರ್ಮ ಶಿಲ್ಪಿಗಳು ಒಟ್ಟು 9 ತಿಂಗಳು ಕಾಲ ಜತೆಯಾಗಿ ತಯಾರಿಸಿದ್ದಾರೆ. ತಲಾ 15 ಟನ್ ತೂಕದ ಈ ಎರಡು ರಥಗಳು ಈಗ ಗೋಕಾಕಕ್ಕೆ ತಲುಪಿದ್ದು, ಬಂಗಾರ ಲೇಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ದೇವಿಯ ರಥೋತ್ಸವಕ್ಕೆ ಸಜ್ಜಾಗಿವೆ.
ಪ್ರಮುಖ ಕಾರ್ಯಕ್ರಮಗಳ ವಿವರ
- ಜೂನ್ 30: ದೇವಿಯನ್ನು ಜಿನಗಾರ ಮನೆಯಿಂದ ಅಂಬಿಗೇರ ಓಣಿಗೆ ಸೇರಿಸಲಾಗುವುದು
- ಜುಲೈ 2: ಮಹಾಲಕ್ಷ್ಮೀ ದೇವಿಗೆ ಅಭಿಷೇಕ, ನೈವೈದ್ಯ, ಹೊನ್ನಾಟ
- ಜುಲೈ 3-4: ರಥೋತ್ಸವ; ದೇವಿಯರ ಎರಡು ರಥಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತವೆ
- ಜುಲೈ 5: ನೈವೈದ್ಯ ಕಾರ್ಯಕ್ರಮ, ದೇವಿಗೆ ಮದ್ದು ಹಾರಿಸುವ ಶರ್ತುಗಳು
- ಜುಲೈ 6-8: ವಿವಿಧ ಸ್ಪರ್ಧೆಗಳು, ಕುಸ್ತಿ ಪಂದ್ಯಾವಳಿ, ದೇವರಿಗೆ ನೈವೈದ್ಯ
ಮದ್ಯ ಮಾರಾಟಕ್ಕೆ ನಿಷೇಧ
ಜಾತ್ರಾ ದಿನಗಳಲ್ಲಿ ಭದ್ರತೆ ಹಾಗೂ ಶಿಸ್ತಿನ ದೃಷ್ಟಿಯಿಂದ ಜುಲೈ 1 ರಿಂದ 5ರವರೆಗೆ, ದೇವಸ್ಥಾನದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಈ ಮೂಲಕ ಕರದಂಟು ನಾಡಿನಲ್ಲಿ ಮತ್ತೆ ಶ್ರದ್ಧೆ, ಸಂಸ್ಕೃತಿ ಹಾಗೂ ಸಂಭ್ರಮದ ಭಾವನೆ ಮೂಡಿಸಿ ಲಕ್ಷ್ಮೀ ದೇವಿಯ ಜಾತ್ರೆ ಭಕ್ತರನ್ನು ತನ್ನತ್ತ ಆಕರ್ಷಿಸಲು ಸಜ್ಜಾಗಿದೆ.
ವರದಿ: ಕಲ್ಲಪ್ಪ ಪಾಮನಾಯಿಕ್
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143