ಯರಗೋಳ: ಗ್ರಾಮದಲ್ಲಿ ಇತ್ತೀಚೆಗಷ್ಟೇ ಸ್ಥಾಪಿಸಲಾದ ಶ್ರೀ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಜುಲೈ 06 ರಂದು ವಿಶಿಷ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ವಿಜಯ ಕುಮಾರ (ನಾರಾಯಣ ಗೌಡ ಬಣ) ಅವರು ಮುಂಜಾನೆ 8 ರಿಂದ 9 ಗಂಟೆಯವರೆಗೆ ದೇವಾಲಯದಲ್ಲಿ ಪೂಜೆ ನೆರವೇರಿಸಿ ದರ್ಶನ ಪಡೆದರು.
ಈ ಸಂದರ್ಭ ಅವರು ಮಾತನಾಡಿ, “ಕನ್ನಡ ನಾಡು-ನುಡಿಯ ಉಳಿವಿಗಾಗಿ ಇಂತಹ ಭಕ್ತಿಯ ಕೇಂದ್ರಗಳು ಪ್ರತಿ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಅನ್ಯಭಾಷಾ ಪ್ರಭಾವವನ್ನು ಕಡಿಮೆ ಮಾಡಬೇಕಾದರೆ ಕನ್ನಡದ ಚೈತನ್ಯವನ್ನು ಈ ದೇಗುಲಗಳ ಮೂಲಕ ಜಾಗೃತಗೊಳಿಸಬೇಕು” ಎಂದರು.
ಮುಂದುವರೆದು, “ಪ್ರತಿಯೊಬ್ಬ ಕನ್ನಡಿಗರು, ಕರವೇ ಕಾರ್ಯಕರ್ತರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಗೆ ಕನ್ನಡ ತಾಯಿ ದರ್ಶನ ಮಾಡಬೇಕು. ಇವು ನಾವೆಲ್ಲರ ಸಂಸ್ಕೃತಿಯ ಕೇಂದ್ರಗಳಾಗಬೇಕು” ಎಂದು ಹೇಳಿದರು.
ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಶಿವರಾಜ ಬಿ. ಮಾನೆಗಾರ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ರೈತರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಗೌರವ ಹೆಚ್ಚಿಸಿದರು.
ವಿಜಯ ಕುಮಾರ ಅವರು ತಮ್ಮ ಭಾಷಣದಲ್ಲಿ, “ಭುವನೇಶ್ವರಿ ಸೇವಾ ಸಮಿತಿಗಳು ಪ್ರತಿಯೊಂದು ಗ್ರಾಮ, ತಾಲೂಕಿನಲ್ಲಿ ಪುಟಿದೇಳಬೇಕು. ಈ ಮೂಲಕ ನಾಡು ನುಡಿಯ ರಕ್ಷಣೆ ಸಾಧ್ಯ” ಎಂಬ ದೃಷ್ಟಿಕೋನವನ್ನು ಹಂಚಿಕೊಂಡರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತ, ಸರ್ವ ಕನ್ನಡ ಮನಸ್ಸುಗಳು ಭಾವಪೂರಿತವಾಗಿ ಭಾಗವಹಿಸಿದ ಈ ಧಾರ್ಮಿಕ ಸಮಾರಂಭ ಗ್ರಾಮದಲ್ಲಿ ಒಂದು ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತ್ತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143