ಅಥಣಿ: ಪಟ್ಟಣದ ಜಮಖಂಡಿ ರಸ್ತೆಯ ತನಿಷ್ಕ್ ಬಾರ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ 10 ವರ್ಷದ ಬಾಲಕನು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಸ್ಥಳೀಯರಿಂದ ಲಭಿಸಿದ ಮಾಹಿತಿ ಪ್ರಕಾರ, ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಕಾರು ಹಾದುಹೋಗಿದ್ದು, ತೀವ್ರ ಗಾಯಗಳಾದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ ಕಾರು ಚಾಲಕ ನಿಲ್ಲದೇ ಪರಾರಿಯಾಗಿದ್ದಾನೆ. ಘಟನೆಯು ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದೆ.
ಅಪಘಾತದ ತಕ್ಷಣ ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು, ಅಪಘಾತಕ್ಕೆ ಕಾರಣವಾದ ಕಾರು KA 23 N 8514 ಎಂದು ಗುರುತಿಸಿದ್ದು, ಚಾಲಕನನ್ನು ಅಥಣಿ ಮೂಲದ ರಾಹುಲ್ ಸುರೇಂದ್ರ ಹುಂಡೇಕರ್ ಎಂದು ತಿಳಿಸಿದ್ದಾರೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದ್ದ ಈತನನ್ನು ಪೊಲೀಸರು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೃತ ಬಾಲಕನ ತಾಯಿ ಬಿಯಾಪಟ್ಟಾದ ಆಕ್ರಂದನದಿಂದ ಪರಿಸರ ದುಃಖಮಯವಾಗಿತ್ತು. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಅಥವಾ ಜಾಹೀರಾತಿಗಾಗಿ ಸಂಪರ್ಕಿಸಿ:
+91 91645 77143