ಹುಕ್ಕೇರಿ: ತಾಲೂಕಿನ ಶಾಹಾಬಂದರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಈ ವರ್ಷವೂ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದ ಸಂಪ್ರದಾಯದಂತೆ ಐದು ದಿನಗಳ ಕಾಲ ಹುಲಿಯಾಟ ಮತ್ತು ಛಡಿ ಕುಣಿತದೊಂದಿಗೆ ಸಡಗರದಿಂದ ಹಬ್ಬವನ್ನು ಆಚರಿಸಲಾಯಿತು. ಆಚರಣೆಯ ಅಂತಿಮ ದಿನದಂದು ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಸೇರಿ ದೇವರನ್ನು ಹೊಳೆಗೆ ಬಿಡುವ ಕಾರ್ಯಕ್ರಮವನ್ನು ಸಹ ನೆರವೇರಿಸಿದರು.
ಏಳನೇ ಶತಮಾನದಲ್ಲಿ ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಮತ್ತು ಅವರ ಸಂಗಡಿಗರು ಯಜೀದ್ ವಿರುದ್ಧ ಕರ್ಬಲಾ ಮೈದಾನದಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡಿದರು. ಈ ದುರಂತ ಘಟನೆಯ ಶೋಕಾಚರಣೆಯ ಭಾಗವಾಗಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ಬಲಾದ ವೀರರ ಸಾವಿನ ದಾರುಣ ಸ್ಮರಣಾರ್ಥವಾಗಿ, ಅವರ ತಲೆ ಕಡಿದು ಮೆರವಣಿಗೆ ಮಾಡಿದ ಘಟನೆ ಮತ್ತು ಮಕ್ಕಳು ನೀರಿಲ್ಲದೆ ಪರದಾಡಿ ಮೃತಪಟ್ಟಿದ್ದು, ಮಹಿಳೆಯರು ದುಃಖದಿಂದ ಪರಿತಪಿಸಿದ್ದು ಈ ಆಚರಣೆಯ ಮೂಲವಾಗಿದೆ. “ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ” ಎಂಬ ಜನಪದ ಗೀತೆ ಈ ದುಗುಡದ ನೆನಪನ್ನು ಬಿಂಬಿಸುತ್ತದೆ.
ಕರ್ನಾಟಕದ ಅನನ್ಯ ಸಾಂಸ್ಕೃತಿಕ ಆಚರಣೆ
ಮೂಲತಃ ಶೋಕಾಚರಣೆಯಾಗಿ ಹುಟ್ಟಿದ ಮೊಹರಂ, ಕರ್ನಾಟಕದಲ್ಲಿ ಅನನ್ಯ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರಗೊಂಡಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ, ಇದು ಜಾತಿ-ಮತ ಭೇದವಿಲ್ಲದೆ ಎಲ್ಲ ಧರ್ಮದ ಜನರು ಒಟ್ಟಾಗಿ ಆಚರಿಸುವ ಒಂದು ಊರಹಬ್ಬವಾಗಿದೆ. ಮುಸ್ಲಿಮರೇ ಇಲ್ಲದ ನೂರಾರು ಹಳ್ಳಿಗಳಲ್ಲೂ ಮೊಹರಂ ಆಚರಣೆ ನಡೆಯುವುದು ಇದರ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಮೊಹರಂ ಹಬ್ಬದಲ್ಲಿ ಶೋಕಗೀತೆಗಳ ರಚನೆ ಮತ್ತು ಹಾಡಿಕೆ, ಹುಲಿಕುಣಿತ, ಕರಡಿ ಕುಣಿತ, ಕಿಚ್ಚು ಹಾಯುವುದು, ವೇಷಗಾರಿಕೆ, ಮೆರವಣಿಗೆ, ವಿಶೇಷ ಸಕ್ಕರೆ ಬಿಡುವುದು, ಚೊಂಗೆ ಮಾಡುವುದು, ಆಹಾರಗಳ ಹಂಚಿಕೆ ಮತ್ತು ಹರಕೆ ಕಟ್ಟುವುದು ಸೇರಿದಂತೆ ಹಲವು ಆಯಾಮಗಳಿವೆ. ಇದರ ಪರಿಣಾಮವಾಗಿ, ಕರ್ನಾಟಕದಲ್ಲಿ ಸಾವಿರಾರು ಶಾಹಿರರು (ಜನಪದ ಕವಿಗಳು) ಮತ್ತು ಗಾಯಕರು, ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ ಕಲಾವಿದರು, ಹಾಗೂ ಹುಲಿವೇಷ, ಅಚೊಳ್ಳಿ ಸೋಗು, ಭಡಂಗ್ ವೇಷ ಹಾಕುವ ಹರಕೆ ಕಲಾವಿದರು ಇದ್ದಾರೆ.
ಸೌಹಾರ್ದತೆಯ ಸಂಕೇತವಾದ ಮೊಹರಂ ಆಚರಣೆ
ಇಂತಹ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶಾಹಾಬಂದರ ಗ್ರಾಮದಲ್ಲಿ ಸುತ್ತಮುತ್ತಲಿನ ಚಿಕ್ಕಲದಿನ್ನಿ, ಗಜಪತಿ, ಗುಟ್ಟಗುದ್ದಿ, ರಾಜನಕಟ್ಟಿ ಗ್ರಾಮಗಳ ಜನರು ಐದು ದಿನಗಳ ಕಾಲ ಸರಳವಾಗಿ ಮತ್ತು ಶಾಂತಿಯುತವಾಗಿ ಆಚರಿಸಿದರು. ಅಂತಿಮ ದಿನವಾದ ಇಂದು, ಹಿಂದೂ-ಮುಸ್ಲಿಂ ಭಾವೈಕ್ಯತೆಯೊಂದಿಗೆ ಹಬ್ಬವು ಶಾಂತಿಯುತವಾಗಿ ಸಂಪನ್ನಗೊಂಡಿತು. ಇದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಸೌಹಾರ್ದಯುತ ಬದುಕಿಗೆ ಉತ್ತಮ ನಿದರ್ಶನವಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143