ಯಮಕನಮರಡಿ: ಅನೇಕರು ಸಂಘ ಸಂಸ್ಥೆಗಳನ್ನು ಆರಂಭಿಸಿ ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ, ತಮ್ಮ ಕುಟುಂಬವನ್ನು ಮಾತ್ರ ಬೆಳಸಿಕೊಳ್ಳುತ್ತಾರೆ. ಆದರೆ ನಿಲಜಗಿ ಬಂಧುಗಳು ಕೇವಲ ತಮ್ಮ ಅಭಿವೃದ್ಧಿಗಷ್ಟೇ ಅಲ್ಲ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಾ ಜನತೆಗೆ ಅನುಕೂಲವಾಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಸಿದ್ಧ ಆದ್ಯಾತ್ಮಿಕ ಗುರು ರೂಪಾ ಅಯ್ಯರ ಅವರು ಶ್ಲಾಘಿಸಿದರು.
ಹುಕ್ಕೇರಿ ತಾಲೂಕಿನ ಶ್ರೀ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ದಿ. ವಸಂತ ನಿಲಜಗಿ ಅವರ ೭ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗದ ಮಹತ್ವವನ್ನು ವಿವರಿಸಿದ ಅವರು – “ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯವಶ್ಯಕ. ದೇವರು ಪಂಚೇಂದ್ರಿಯಗಳನ್ನು ಕೊಟ್ಟಿದ್ದಾನೆ, ಆದರೆ ಅವುಗಳನ್ನು ಸರಿಯಾಗಿ ಬಳಸುವುದು ನಮ್ಮ ಜವಾಬ್ದಾರಿ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯ ಡಾ. ರಮೇಶ ಹೊಡಬಂಗಿ – “ಮಿತ ಆಹಾರ, ಉತ್ತಮ ನಿದ್ರೆ, ವಿಷಮುಕ್ತ ಆಹಾರ ಸೇವನೆ, ಯೋಗ ವ್ಯಾಯಾಮ ಮತ್ತು ಚಿಂತೆಮುಕ್ತ ಜೀವನದಿಂದ ಉತ್ತಮ ಆರೋಗ್ಯ ಸಾಧ್ಯ. ಇಂದು ಮಕ್ಕಳಿಗೆ ಬ್ರೆಡ್, ಬಿಸ್ಕತ್ಗಳನ್ನು ನೀಡುವ ಬದಲು ಪೌಷ್ಟಿಕ ಆಹಾರ ನೀಡಬೇಕಾಗಿದೆ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಶ್ರೀ ಅಭಿನವ ಮಂಜುನಾಥ ಸ್ವಾಮಿಜಿ, ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಪ್ರಜ್ವಲ್ ನಿಲಜಗಿ, ಶೀಲ್ಪಾ ದೊಡಮನಿ, ಡಾ. ಮಯೂರ ಕುಲಕರ್ಣಿ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸಂಜೀವ ನಿಲಜಗಿ, ವಿಜಯಮಾಲಾ ನಿಲಜಗಿ, ಅಶೋಕ ಪಾಟೀಲ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಅಚಿಜನಾ ಗುಗ್ಗಳಿ ನಿರೂಪಣೆ ನಿರ್ವಹಿಸಿ ವಂದಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143