ಶಿವಮೊಗ್ಗ: ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ‘ದೆವ್ವ ಹಿಡಿದಿದೆ’ ಎಂಬ ನಂಬಿಕೆಯಲ್ಲಿ ಮಹಿಳಾ ಮಂತ್ರವಾದಿಯೊಬ್ಬರ ಅಂಧಶ್ರದ್ಧೆಗೊಳಗಾಗಿ ಮಹಿಳೆಯೊಬ್ಬರು ಸಾವಿಗೀಡಾದ ದುರ್ಘಟನೆ ನಡೆದಿದೆ.
ಮೃತಳು ಜಂಬರಘಟ್ಟ ಗ್ರಾಮದ ಗೀತಾ (35) ಎಂಬವರಾಗಿದ್ದು, ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದ್ದ ಸಂದರ್ಭದಲ್ಲೇ, ಗೀತಾಗೆ ದೆವ್ವ ಹಿಡಿದಿದೆ ಎಂದು ನಂಬಿದ ಕುಟುಂಬಸ್ಥರು ಅವರನ್ನು ಸ್ಥಳೀಯ ಮಂತ್ರವಾದಿ ಆಶಾ ಎಂಬ ಮಹಿಳೆಯ ಬಳಿ ಕರೆದುಕೊಂಡು ಹೋಗಿದ್ದರು.
ದೆವ್ವ ಬಿಡಿಸುವ ನಾಟಕದಲ್ಲಿ ಆಶಾ ಮಹಿಳೆಗೆ ಕೋಲಿನಿಂದ ಹೊಡೆದು “ಕೊಲಿನಿಂದ ಬಡಿದರೆ ದೆವ್ವ ಹೊರ ಬೀಳುತ್ತದೆ” ಎಂದು ನಂಬಿಸಿದ್ದಾಗಿ ತಿಳಿದು ಬಂದಿದೆ. ಇದರಿಂದ ಗೀತಾ ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆಗೂ ಮೊದಲು ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿತ ಆಶಾ ಅವರನ್ನು ಬಂಧಿಸಿದ್ದಾರೆ. ಗೀತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಘಟನೆ ಗ್ರಾಮದಲ್ಲಿ ಆಘಾತ ಸೃಷ್ಟಿಸಿದ್ದು, ಅಂಧಶ್ರದ್ಧೆ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143