ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ೪೦೨ ಪೊಲೀಸ್ ಉಪ ನಿರೀಕ್ಷಕರ (PSI) ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, 10,000 ದಿಂದ 15,000 ಕಾನ್ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಗೂ ಚಾಲನೆ ನೀಡಿದೆ.
ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಘೋಷಿಸಿದರು. “402 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಈಗಾಗಲೇ ಆದೇಶ ನೀಡಲಾಗಿದೆ. ಶೀಘ್ರದಲ್ಲೇ 15,000 ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯ ಪ್ರಕ್ರಿಯೆ ಆರಂಭವಾಗಲಿದೆ,” ಎಂದು ಅವರು ತಿಳಿಸಿದರು.
ಹುದ್ದೆಗಳ ಭರ್ತಿ ಪ್ರಕ್ರಿಯೆ ಬಹು ಹಂತದಲ್ಲಿ ನಡೆಯಲಿದ್ದು, ಬರೆಹ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಇತರೆ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನೇಮಕಾತಿಯಲ್ಲಿ ಯಾವುದೇ ಅನ್ಯಾಯ ನಡೆಯದಂತೆ ಪಾರದರ್ಶಕತೆಯನ್ನು ಕಾಪಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸ್ಥಳೀಯ ನಾಗರಿಕರಿಂದ ಮಂಗಳೂರು ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬೇಡಿಕೆ ಮೊಳಗಿದ ಹಿನ್ನೆಲೆಯಲ್ಲಿ, ಗೃಹ ಸಚಿವರು ಇದನ್ನು ಗಮನಿಸಿ “ಈ ವಿಷಯ ಸರ್ಕಾರದ ಗಮನದಲ್ಲಿದೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.
ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ನೇಮಕಾತಿ ವೆಬ್ಸೈಟ್ಗಳಲ್ಲಿ ಪ್ರಕಟವಾಗಲಿದೆ. ಆಸಕ್ತ ಅಭ್ಯರ್ಥಿಗಳು ಈ ವೆಬ್ಸೈಟ್ಗಳನ್ನು ನಿಯಮಿತವಾಗಿ ಪರಿಶೀಲಿಸಲು ಸಲಹೆ ನೀಡಲಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143