ಯಮಕನಮರಡಿ: ಘಟಪ್ರಭಾ ನದಿಯ ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಡ್ಯಾಂ) ಭರ್ತಿ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಬುಧವಾರ ಜಲಾಶಯದ ಆರು ಗೇಟುಗಳನ್ನು ತೆರೆಯಲಾಗಿದ್ದು, ಸುಮಾರು 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕಿದ ನೀರಿನ ಹರಿವಿನ ದೃಶ್ಯ ಕುತೂಹಲ ಮೂಡಿಸಿತು.
ಹುಕ್ಕೇರಿ ತಹಸಿಲ್ದಾರ ಶ್ರೀಮತಿ ಮಂಜುಳಾ ನಾಯಿಕ ಅವರು ಕ್ರಸ್ಟ್ ಗೇಟುಗಳಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾಶಯದ ಸಂಪೂರ್ಣ ಸಾಮರ್ಥ್ಯ 51 ಟಿಎಂಸಿ ಆಗಿದ್ದು, ಪ್ರಸ್ತುತ ಶೇ. 85ರಷ್ಟು ಭರ್ತಿಯಾಗಿದೆ ಎಂದು ಮಾಹಿತಿ ನೀಡಿದರು. ಈವರೆಗೆ 42 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಘಟಪ್ರಭಾ ನದಿಗೆ 18,000 ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದೆ. ಇನ್ನೂ 9 ಟಿಎಂಸಿ ನೀರು ಸೇರಬೇಕಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಜುಲೈ ಕೊನೆಯ ವಾರದಲ್ಲಿ ನೀರು ಬಿಡಲಾಗಿದ್ದರೆ, ಈ ವರ್ಷ ಆರಂಭದಲ್ಲಿಯೇ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ನೀರನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಒಳಹರಿಯುವ ಸಾಧ್ಯತೆ ಇದೆ.
ಹುಕ್ಕೇರಿ, ಗೋಕಾಕ, ಮೂಡಲಗಿ ಮತ್ತು ಮುಧೋಳ ತಾಲೂಕಿನ ನದಿ ತೀರದ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ನೀಡಲಾಗಿದೆ. ನೀರಾವರಿ ಇಲಾಖೆ ಈ ಕುರಿತಂತೆ ಸಂಬಂಧಿತ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತ ಸೂಚನೆ ನೀಡಿದೆ.
ಶಿರೂರ್ ಡ್ಯಾಂ ಸಹ ಭರ್ತಿಯ ಹಂತ ತಲುಪಿದ್ದು, 3.69 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗಾಗಲೇ 3.38 ಟಿಎಂಸಿ ನೀರು ಸಂಗ್ರಹಗೊಂಡಿದೆ. 4,000 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನಾಲ್ಕು ಗೇಟುಗಳ ಮೂಲಕ 3,700 ಕ್ಯೂಸೆಕ್ ನೀರು ಹೊರಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ನದಿ ತೀರದ ರೈತರಿಗೆ ಮತ್ತು ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ಕೆಳ ಹಂತದಲ್ಲಿನ ಕೆಲ ಸೇತುವೆಗಳು ಜಲಾವೃತಗೊಂಡಿವೆ. ಅಲ್ಲದೆ, ಸುಮಾರು 15 ಮನೆಗಳಿಗೆ ಗೋಡೆ ಕುಸಿತದ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಘಟಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಅಶೋಕ ಕಣರಟ್ಟಿ, ಎಇಇ ಜಗದೀಶ್ ವಿ.ಕೆ, ರಾಜಶೇಖರ ಪಾಟೀಲ, ಎ.ಎಚ್. ಜಮಖಂಡಿ, ಸಂಜು ಹೊಸಮನಿ, ಪ್ರವೀಣ ಅರಳಿಕಟ್ಟಿ, ಯಮಕನಮರಡಿ ಸಿಪಿಐ ಜಾವೇದ ಮುಷಾಪುರಿ, ಗೋಕಾಕ ಡಿಎಸ್ಪಿ ರವಿ ನಾಯಿಕ, ಹಾಗೂ ಹುಕ್ಕೇರಿ ತಾಲೂಕು ಅರಣ್ಯ ಅಧಿಕಾರಿ ಆರ್.ಬಿ. ಸನದಿ ಉಪಸ್ಥಿತರಿದ್ದರು.
ವರದಿ: ಕಲ್ಲಪ್ಪ ಪಾಮನಾಯಿಕ್
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143